ಬೆಂಗಳೂರು: ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿ ಹೋಗಿರುವ ಸಾಮಾನ್ಯ ಜನರಿಗೆ ಈಗ ಮತ್ತೊಂದು ಆಘಾತ ಎದುರಾಗಿದೆ.
ನಿತ್ಯದ ಆಹಾರದ ಮುಖ್ಯ ಧಾನ್ಯವಾಗಿರುವ ಅಕ್ಕಿಯ ದರ ಕೈಗೆಟುಕದ ಮಟ್ಟಿಗೆ ಏರುತ್ತಿದ್ದು, ಕೇವಲ ಒಂದೇ ತಿಂಗಳ ಅವಧಿಯಲ್ಲಿ ಪ್ರತಿ ಕೆಜಿಗೆ ಬರೋಬ್ಬರಿ 11 ರಿಂದ 13 ರೂಪಾಯಿಗಳವರೆಗೆ ಹೆಚ್ಚಳವಾಗಿದೆ.
ಇದರ ನೇರ ಪರಿಣಾಮವಾಗಿ 26 ಕೆಜಿಯ ಅಕ್ಕಿ ಮೂಟೆಯ ಚಿಲ್ಲರೆ ದರದಲ್ಲಿ ಸುಮಾರು 160 ರೂಪಾಯಿಗಳಷ್ಟು ಭಾರೀ ಏರಿಕೆ ಕಂಡುಬಂದಿದೆ.
ಮಾರುಕಟ್ಟೆಯಲ್ಲಿ ಕಳೆದ ಹದಿನೈದು ದಿನಗಳ ಹಿಂದೆಯಷ್ಟೇ ಕೆಜಿಗೆ 6 ರೂಪಾಯಿ ಹೆಚ್ಚಳ ಮಾಡಲಾಗಿತ್ತು.
ಆ ಬಿಸಿ ಆರುವ ಮುನ್ನವೇ ಈಗ ಮತ್ತೆ ವಿವಿಧ ತಳಿಯ ಅಕ್ಕಿಗಳ ಮೇಲೆ ಐದು ರೂಪಾಯಿಗಳನ್ನು ಏರಿಸಲಾಗಿದೆ. ಪರಿಣಾಮವಾಗಿ ಗ್ರಾಹಕರು ಮಾರುಕಟ್ಟೆಗೆ ಹೋಗಿ ಅಕ್ಕಿ ಖರೀದಿಸಲು ಹಿಂಜರಿಯುವಂತಾಗಿದೆ.
ದರ ಏರಿಕೆಯ ಹಿಂದಿನ ಅಸಲಿ ಕಾರಣಗಳೇನು?
ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಇಂಧನ ಮತ್ತು ತೈಲ ಬೆಲೆಗಳು ಸತತವಾಗಿ ಏರಿಕೆಯಾಗುತ್ತಿವೆ.
ಇದರಿಂದಾಗಿ ಸರಕು ಸಾಗಾಣಿಕೆ ವೆಚ್ಚ ಗಣನೀಯವಾಗಿ ಹೆಚ್ಚಾಗಿದ್ದು, ಆ ಹೊರೆಯನ್ನು ವ್ಯಾಪಾರಿಗಳು ಗ್ರಾಹಕರ ಹೆಗಲಿಗೆ ವರ್ಗಾಯಿಸುತ್ತಿದ್ದಾರೆ. ಇದರೊಂದಿಗೆ ದೇಶದ ಅಕ್ಕಿ ರಫ್ತು ನೀತಿಯಲ್ಲಿ ಆಗಿರುವ ಮಹತ್ವದ ಬದಲಾವಣೆಗಳು ಸಹ ದೇಶಿ ಮಾರುಕಟ್ಟೆಯಲ್ಲಿ ದಿಢೀರ್ ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿವೆ.
ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಬಳಕೆಯಾಗುವ ಸೋನಾಮಸೂರಿ, ರಾ ರೈಸ್ (ಕಚ್ಚಾ ಅಕ್ಕಿ) ಹಾಗೂ ಸ್ಟೀಮ್ ರೈಸ್ ಸೇರಿದಂತೆ ಬಹುತೇಕ ಎಲ್ಲಾ ಪ್ರಮುಖ ತಳಿಗಳ ಬೆಲೆಯೂ ಗಗನಕ್ಕೇರಿದೆ.


