ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ವ್ಯಾಪ್ತಿಯ ಎನ್. ಮಹದೇವಪುರ ಗ್ರಾಮದ ಜಮೀನೊಂದರ ಬಾವಿಯಲ್ಲಿ ಮಹಿಳೆಯ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಯಕನಹಟ್ಟಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಚಿಕ್ಕಉಳ್ಳಾರ್ತಿ ಗ್ರಾಮದ ಬೋರಯ್ಯ ಮತ್ತು ಕಾರಯ್ಯ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಅತ್ಯಾಚಾರ ಬಳಿಕ ಕೊಲೆ ಆರೋಪ
ಪೊಲೀಸರ ವಿಚಾರಣೆಯಲ್ಲಿ ಬೋರಯ್ಯ, ಮೃತ ಸುಮಲತಾಳನ್ನು ಎನ್. ಮಹದೇವಪುರ ಗ್ರಾಮದ ಕಂಚಳೇರ ಜಮೀನಿನ ಜಾಲಿ ಗಿಡಗಳ ಮಧ್ಯೆ ಬಲವಂತವಾಗಿ ಅತ್ಯಾಚಾರ ಮಾಡಿದ್ದಾಗಿ ತಿಳಿದುಬಂದಿದೆ.
ಬಳಿಕ ತನ್ನ ಸಹೋದರ ಕಾರಯ್ಯನನ್ನು ಸ್ಥಳಕ್ಕೆ ಕರೆಸಿಕೊಂಡು, ಇಬ್ಬರೂ ಸೇರಿ ಸುಮಲತಾಳ ಮುಖಕ್ಕೆ ಹೊಡೆದು, ಟವಲ್‌ನಿಂದ ಕುತ್ತಿಗೆ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ನಂತರ ಇಬ್ಬರೂ ಸೇರಿ ಮೃತದೇಹವನ್ನು ಸಮೀಪದ ಬಾವಿಗೆ ಎಸೆದಿರುವುದಾಗಿ ವಿಚಾರಣೆ ವೇಳೆ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ 13ರಂದು ನಾಪತ್ತೆ
ಘಟನೆಗೆ ಸಂಬಂಧಿಸಿದಂತೆ ಮೃತ ಸುಮಲತಾಳ ತಂದೆ ಮಹೇಶ್ ಅವರು ಆಗಸ್ಟ್ 15ರಂದು ತಳಕು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತಮ್ಮ ಮಗಳು ಆಗಸ್ಟ್ 13ರಂದು ರಾತ್ರಿ ಸುಮಾರು 11.30ರ ವೇಳೆಗೆ ಚಿಕ್ಕಉಳ್ಳಾರ್ತಿ ಗ್ರಾಮದ ಜಮೀನಿನಲ್ಲಿರುವ ಮನೆಯಿಂದ ಗಜೇಂದ್ರ ಎಂಬ ಯುವಕನೊಂದಿಗೆ ಕಾಣೆಯಾಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದರು.


