ಬೆಳಗಾವಿ: 4,500 ಕೋಟಿ ರೂ ವಂಚನೆ ಆರೋಪದಡಿ ಬೆಳಗಾವಿ ಪೊಲೀಸರು ಶಿವಂ ಅಸೋಸಿಯೇಟ್ಸ್ ನ ಶಿವಾನಂದ ನೀಲಣ್ಣವರ್ ಎಂಬಾತನನ್ನು ಬಂಧಿಸಿದ್ದು, ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ. ಈ ಹಗರಣದ ಬಗ್ಗೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಶಿವಂ ಅಸೋಸಿಯೇಟ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾಅತನಾಡಿದ್ದು, ಪ್ರಕರಣ ಸಿಐಡಿಗೆ ವಹಿಸಲಾಗಿದ್ದು, ತನಿಖೆ ಬಳಿಕ ಎಲ್ಲವೂ ಬಹಿರಂಗವಾಗಲಿದೆ ಎಂದಿದ್ದಾರೆ.ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣವರ್ ಪ್ರಕರಣದ ತನಿಖೆಯನ್ನು ಈಗಾಗಲೇ ಸಿಐಡಿಗೆ ಒಪ್ಪಿಸಲಾಗಿದೆ.
ಸಿಐಡಿ ಅಧಿಕಾರಿಗಳು ತಮ್ಮ ತನಿಖೆಯನ್ನು ಪೂರ್ಣಗೊಳಿಸಿ ವರದಿ ನೀಡಿದ ನಂತರವೇ ಈ ಹಗರಣದ ಸಂಪೂರ್ಣ ಸತ್ಯಾಸತ್ಯತೆ ಮತ್ತು ನಿಖರವಾದ ಮಾಹಿತಿ ಹೊರಬರಲಿದೆ ಎಂದರು.
ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ, ಇದು ಸಂಪೂರ್ಣವಾಗಿ ಸಾರ್ವಜನಿಕರ ಹಣಕಾಸು ವಂಚನೆಗೆ ಸಂಬಂಧಿಸಿದ ವಿಷಯವಾಗಿದೆ. ಕಾನೂನು ಬಾಹಿರವಾಗಿ ಹಣ ಸಂಗ್ರಹಿಸಿ ಸಾರ್ವಜನಿಕರಿಗೆ ಮೋಸ ಮಾಡಿರುವ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಅಥವಾ ಪ್ರೇರೇಪಣೆ ಇಲ್ಲ ಎಂದು ತಿಳಿಸಿದರು.
ಹೆಚ್ಚಿನ ಬಡ್ಡಿಯ ಆಮಿಷಕ್ಕೆ ಒಳಗಾಗಿ ಸಾರ್ವಜನಿಕರು ಕಷ್ಟಪಟ್ಟು ದುಡಿದ ಹಣವನ್ನು ಅನಧಿಕೃತ ಸಂಸ್ಥೆಗಳಲ್ಲಿ ಹೂಡಿಕೆ ಮಾಡಬಾರದು. ಹಣ ಹೂಡಿಕೆ ಮಾಡುವಾಗ ಸಾರ್ವಜನಿಕರು ಎಚ್ಚರಿಕೆ ಹೆಜ್ಜೆ ಇಡಬೇಕು ಎಂದು ಹೇಳಿದರು.
ಯಾವುದೇ ಸಂಸ್ಥೆಗಳು ನಿಯಮಬಾಹಿರವಾಗಿ ಅತಿಯಾದ ಆಸೆ ತೋರಿಸಿದಾಗ ಸಾರ್ವಜನಿಕರು ಜಾಗರೂಕರಾಗಿರಬೇಕು. ಇಂತಹ ವಂಚನೆ ತಡೆಯಲು ಕಾನೂನು ಕ್ರಮದ ಜೊತೆಗೆ ಜನರ ಜಾಗೃತಿಯೂ ಮುಖ್ಯವಾಗಿದೆ ಎಂದು ತಿಳಿಸಿದರು.


