ಬೆಳಗಾವಿ : ಆಧುನಿಕ ಕಾಲದಲ್ಲೂ ಸಾಮಾಜಿಕ ಬಹಿಷ್ಕಾರದಂತಹ (Social Boycott)ಅನಿಷ್ಟ ಪದ್ಧತಿಗಳು ಜೀವಂತವಾಗಿವೆ ಎನ್ನುವುದಕ್ಕೆ ಬೆಳಗಾವಿ ತಾಲೂಕಿನ ಕೊಂಡಸಕೊಪ್ಪ ಗ್ರಾಮದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಪ್ರೀತಿಯ ವಿಚಾರವನ್ನಿಟ್ಟುಕೊಂಡು ಕುರುಬ ಸಮಾಜದವರಿಂದಲೇ ಕುರುಬ ಸಮಾಜದ ಕುಟುಂಬವೊಂದಕ್ಕೆ ಬಹಿಷ್ಕಾರ ಹಾಕಲಾಗಿದೆ.
ಬಹಿಷ್ಕೃತರೊಂದಿಗೆ ಮಾತನಾಡಿದರೆ 5 ಸಾವಿರ ದಂಡ!
ಸಾಂಬ್ರೆಕರ್ ಕುಟುಂಬದ ಯುವತಿಯೊಬ್ಬಳು ಎಸ್ಟಿ (ST) ಸಮಾಜದ ಯುವಕನನ್ನು ಪ್ರೀತಿಸಿದ್ದಾಳೆ ಎಂಬ ಕಾರಣಕ್ಕೆ ಕುರುಬ ಸಮಾಜದ ಮುಖಂಡರು ಈ ಕುಟುಂಬದ ಮೇಲೆ ಕೆಂಗಣ್ಣು ಬೀರಿದ್ದಾರೆ ಎನ್ನಲಾಗಿದೆ.
ಸಮಾಜದ ಕಟ್ಟಪ್ಪಣೆ ಮೀರಿ ನಡೆದಿದ್ದೀರಿ ಎಂದು ಆರೋಪಿಸಿರುವ ಪಂಚರು, ಈ ಕುಟುಂಬದ ಜೊತೆ ಸಮಾಜದ ಯಾರೂ ಮಾತನಾಡಬಾರದು ಎಂದು ಫರ್ಮಾನು ಹೊರಡಿಸಿದ್ದಾರೆ.
ಒಂದು ವೇಳೆ ಯಾರಾದರೂ ಮಾತನಾಡಿದರೆ ಅವರಿಗೆ 5,000 ರೂಪಾಯಿ ದಂಡ ವಿಧಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಕುಟುಂಬಸ್ಥರ ಕಣ್ಣೀರು
ಈ ಬಹಿಷ್ಕಾರದ ಬೆನ್ನಲ್ಲೇ ಮದುವೆ, ಹಬ್ಬ ಹಾಗೂ ಇನ್ನಿತರ ಶುಭ ಕಾರ್ಯಗಳಿಗೆ ಆಹ್ವಾನವಿಲ್ಲದೆ ಸಾಂಬ್ರೆಕರ್ ಕುಟುಂಬ ಒಂಟಿಯಾಗಿದೆ. ಗ್ರಾಮದ ಇತರ ಸಮಾಜದವರೊಂದಿಗೆ ಮಾತನಾಡುವ ಅವಕಾಶವಿದ್ದರೂ, ಸ್ವಜಾತಿಯವರೇ ದೂರ ಇಟ್ಟಿರುವುದು ಕುಟುಂಬವನ್ನು ಕಂಗಾಲಾಗಿಸಿದೆ. ನಮಗೂ ಗೌರವದಿಂದ ಬದುಕಲು ಅವಕಾಶ ಕೊಡಿ ಎಂದು ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ.
ಪೊಲೀಸರ ನಿರ್ಲಕ್ಷ್ಯದ ಆರೋಪ
ಈ ಸಂಬಂಧ ಹಿರೇಬಾಗೇವಾಡಿ ಪೊಲೀಸ್ ಠಾಣೆಗೆ ದೂರು ನೀಡಿ 15 ದಿನಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತರು ಆಕ್ರೋಶ ಹೊರಹಾಕಿದ್ದಾರೆ.
ಇದೇ ನಡುವೆ, ತಡರಾತ್ರಿ ದುಷ್ಕರ್ಮಿಗಳು ಸಾಂಬ್ರೆಕರ್ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಕಾಟಾಚಾರಕ್ಕೆ ಪರಿಶೀಲಿಸಿ ವಾಪಸ್ ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಜೀವ ಭಯದಲ್ಲಿ ದಿನ ದೂಡುತ್ತಿರುವ ನಮಗೆ ರಕ್ಷಣೆ ನೀಡಿ ಎಂದು ಸಾಂಬ್ರೆಕರ್ ಕುಟುಂಬ ನ್ಯಾಯಕ್ಕಾಗಿ ಅಂಗಲಾಚುತ್ತಿದೆ.

