ಬೆಂಗಳೂರು: ರಾಜ್ಯಸಭೆಯ 4 ಹಾಗೂ ವಿಧಾನಪರಿಷತ್‌ನ 7 ಸ್ಥಾನಗಳ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆ ಇಂದಿಗೆ ಮುಕ್ತಾಯಗೊಂಡಿದೆ.
ಆಡಳಿತಾರೂಢ ಕಾಂಗ್ರೆಸ್, ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ನ ಅಭ್ಯರ್ಥಿಗಳು ಇಂದು ಚುನಾವಣಾ ಅಧಿಕಾರಿಯೂ ಆಗಿರುವ ವಿಧಾನಸಭಾ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರಿಗೆ ತಮ್ಮ ನಾಮಪತ್ರಗಳನ್ನು ಸಲ್ಲಿಕೆ ಮಾಡಿದ್ದಾರೆ.
ಜೂನ್ 9 ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಗುರುವಾರ ಕೊನೆಯ ದಿನವಾಗಿದೆ.
ಜೂನ್ 18 ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆದು, ಅಂದೇ ಸಂಜೆ ಫಲಿತಾಂಶ ಪ್ರಕಟಗೊಳ್ಳಲಿದೆ.
ಕರ್ನಾಟಕದಿಂದ ತೆರವಾಗಲಿರುವ ಒಟ್ಟು 4 ರಾಜ್ಯಸಭಾ ಸ್ಥಾನಗಳಿಗೆ ಸಲ್ಲಿಕೆಯಾಗಿರುವ ನಾಮಪತ್ರಗಳ ಸಂಖ್ಯೆಯ ಆಧಾರದ ಮೇಲೆ ಎಲ್ಲಾ ಅಭ್ಯರ್ಥಿಗಳ ಅವಿರೋಧ ಆಯ್ಕೆ ಬಹುತೇಕ ಖಚಿತವಾಗಿದೆ.
ಕಾಂಗ್ರೆಸ್ ಕಾಂಗ್ರೆಸ್‌ನಿಂದ ಎಐಸಿಸಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ಖರ್ಗೆ, ಮನ್ಸೂರ್ ಅಲಿಖಾನ್ ಹಾಗೂ ಪವನ್ ಖೇರಾ ಕಣದಲ್ಲಿದ್ದಾರೆ.
ಬಿಜೆಪಿಯಿಂದ ಪ್ರೊ. ಎಂ. ನಾಗರಾಜ್ ಕಣದಲ್ಲಿ ಇದ್ದಾರೆ. ನಾಲ್ಕು ಸ್ಥಾನಗಳಿಗೆ ಕೇವಲ ನಾಲ್ಕೇ ನಾಮಪತ್ರಗಳು ಸಲ್ಲಿಕೆಯಾಗಿರುವುದರಿಂದ ರಾಜ್ಯಸಭೆಗೆ ಮತದಾನದ ಪ್ರಕ್ರಿಯೆ ಇಲ್ಲದೆಯೇ ಇವರೆಲ್ಲರೂ ಅವಿರೋಧವಾಗಿ ಸಂಸತ್ತಿನ ಮೇಲ್ಮನೆಗೆ ಪ್ರವೇಶಿಸಲಿದ್ದಾರೆ.


