ಬೆಂಗಳೂರು: ರಾಜ್ಯ ಸಚಿವ ಸಂಪುಟದಲ್ಲಿ ಮತ್ತೆ ಭಾರಿ ಬದಲಾವಣೆಗಳಾಗುವ ಮುನ್ಸೂಚನೆ ಸಿಕ್ಕಿದ್ದು, ವಿಧಾನ ಮಂಡಲ ಅಧಿವೇಶನದ ಮುಕ್ತಾಯದ ಬೆನ್ನಲ್ಲೇ ಸಂಪುಟ ಪುನಾರಚನೆಗೆ ಭರ್ಜರಿ ಕಸರತ್ತು ಆರಂಭವಾಗಲಿದೆ.
ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸುದೀರ್ಘ ಚರ್ಚೆಗಳ ನಂತರ ಸಂಪುಟ ರಚನೆ ಮಾಡಲಾಗಿತ್ತಾದರೂ, ಇದೀಗ ಕನಿಷ್ಠ ಮೂರರಿಂದ ಐದು ಮಂದಿ ಸಚಿವರಿಗೆ ಕೊಕ್ ನೀಡುವ ಸಾಧ್ಯತೆ ದಟ್ಟವಾಗಿದೆ.
ರಾಜ್ಯ ರಾಜಕಾರಣದ ಪ್ರಮುಖ ಚಟುವಟಿಕೆಗಳು ಶೀಘ್ರದಲ್ಲೇ ದೆಹಲಿಗೆ ಶಿಫ್ಟ್ ಆಗಲಿದ್ದು, ಈ ಕುರಿತು ಕಾಂಗ್ರೆಸ್ ಹೈಕಮಾಂಡ್ ನಾಯಕರೊಂದಿಗೆ ಮುಖ್ಯಮಂತ್ರಿಗಳು ಗಂಭೀರ ಚರ್ಚೆ ನಡೆಸಲಿದ್ದಾರೆ.
ಸಂಪುಟದಲ್ಲಿ ಸ್ಥಾನ ಸಿಗದೆ ಅತೃಪ್ತರಾಗಿರುವ ಹಿರಿಯ ನಾಯಕರು ಹಾಗೂ ರೆಬಲ್ ಶಾಸಕರನ್ನು ಸಮಾಧಾನಪಡಿಸಲು ಹೈಕಮಾಂಡ್ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ಮುಖ್ಯವಾಗಿ ಹಿರಿತನಕ್ಕೆ ಸೂಕ್ತ ಆದ್ಯತೆ ನೀಡದಿರುವುದು, ಜಾತಿ ಸಮೀಕರಣದ ಏರುಪೇರು ಮತ್ತು ಸಂಪುಟದಲ್ಲಿ ಜನತಾ ಪರಿವಾರದ ಹಿನ್ನೆಲೆಯ 17 ಮಂದಿಗೆ ಸ್ಥಾನ ನೀಡಿರುವುದಕ್ಕೆ ಕಾಂಗ್ರೆಸ್ ಮೂಲ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕೆಲ ಹಿರಿಯ ಸಚಿವರನ್ನು ಸಂಪುಟದಿಂದ ಕೈಬಿಟ್ಟು, ಪಕ್ಷಕ್ಕಾಗಿ ಶ್ರಮಿಸಿದ ಇತರ ನಾಯಕರಿಗೆ ಅವಕಾಶ ಮಾಡಿಕೊಡಲು ಹೈಕಮಾಂಡ್ ತೀರ್ಮಾನಿಸಿದೆ.


