ಬೆಂಗಳೂರು : ಬೆಂಗಳೂರಿನ ಯಲಹಂಕದಲ್ಲಿ ಒಂದೇ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ನೇಪಾಳ ಮೂಲದ ಇಬ್ಬರು ಯುವತಿಯರ ಶವ ಪತ್ತೆಯಾಗಿದ್ದು, ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತ್ಮಹತ್ಯೆಯೋ ಅಥವಾ ಅನುಮಾನಾಸ್ಪದ ಸಾವೋ ಎಂಬ ಎಲ್ಲಾ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ.
ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಬೆಳಿಗ್ಗೆ ಒಂದೇ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಯುವತಿಯರ ಶವ ಪತ್ತೆಯಾಗಿದೆ.
ಮೃತರನ್ನು ನೇಪಾಳ ಮೂಲದ ಸಿರ್ಜನಾ (22) ಮತ್ತು ರಿತಾ (23) ಎಂದು ಗುರುತಿಸಲಾಗಿದೆ. ಇಬ್ಬರೂ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ಸ್ಥಳೀಯರು ಘಟನೆ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಜ್ಞರ ತಂಡ ಸ್ಥಳಕ್ಕೆ ಆಗಮಿಸಿ ಸಾಕ್ಷ್ಯಗಳನ್ನು ಸಂಗ್ರಹಿಸಿತು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಇಬ್ಬರೂ ಯುವತಿಯರು ಯಾವ ಕಾರಣಕ್ಕೆ ಈ ಕೃತ್ಯಕ್ಕೆ ಮುಂದಾದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವೈಯಕ್ತಿಕ ಕಾರಣ, ಉದ್ಯೋಗದ ಒತ್ತಡ ಅಥವಾ ಬೇರೆ ಯಾವುದೇ ಹಿನ್ನೆಲೆ ಇದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.


