ಮೈಸೂರು: ರಾಜ್ಯ ರಾಜಕಾರಣದಲ್ಲಿ ಸಂಪುಟ ಪುನಾರಚನೆ ಮತ್ತು ನಾಯಕತ್ವ ಬದಲಾವಣೆಯ ಚರ್ಚೆಗಳು ತೀವ್ರಗೊಂಡಿರುವ ನಡುವೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುರಿತು ಮಹತ್ವದ ಸ್ಪಷ್ಟನೆ ನೀಡಿದ್ದಾರೆ.
ರಾಹುಲ್ ಗಾಂಧಿ (Rahul Gandhi) ಅವರು ಇದುವರೆಗೂ ನನ್ನನ್ನು ದೆಹಲಿಗೆ ಕರೆದಿಲ್ಲ, ಹೀಗಾಗಿ ಸದ್ಯಕ್ಕೆ ದೆಹಲಿ ಪ್ರವಾಸದ ಯಾವುದೇ ಯೋಜನೆಯಿಲ್ಲ ಎಂದು ಅವರು ತಿಳಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ರಾಹುಲ್ ಗಾಂಧಿ ಅವರು ನನ್ನನ್ನು ದೆಹಲಿಗೆ ಕರೆದಿಲ್ಲ ಮತ್ತು ನಾನು ಕೂಡ ಅವರ ಭೇಟಿಗೆ ಅವಕಾಶ ಕೇಳಿಲ್ಲ. ಒಂದು ವೇಳೆ ಅವರು ಕರೆದರೆ ಖಂಡಿತವಾಗಿಯೂ ಹೋಗುತ್ತೇನೆ, ಎಂದು ಹೇಳಿದರು.
ಸಂಪುಟ ಪುನಾರಚನೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹೈಕಮಾಂಡ್‌ನಿಂದ ಕರೆಯೇ ಬಂದಿಲ್ಲ ಎಂದ ಮೇಲೆ ಚರ್ಚೆಯ ಅಜೆಂಡಾ ಹೇಗೆ ಫಿಕ್ಸ್ ಆಗುತ್ತದೆ? ಭೇಟಿ ನಿರ್ಧಾರವಾದ ಮೇಲೆ ಅದು ಸಂಪುಟ ವಿಸ್ತರಣೆಯೋ ಅಥವಾ ಬೇರೆ ವಿಷಯವೋ ಎಂಬುದು ತಿಳಿಯಲಿದೆ, ಎಂದರು.
ಒಂದು ವೇಳೆ ಹೈಕಮಾಂಡ್‌ನಿಂದ ಕರೆ ಬರದಿದ್ದರೆ, ಅಗತ್ಯವಿದ್ದಲ್ಲಿ ನಾನೇ ರಾಹುಲ್ ಗಾಂಧಿ ಅವರ ಬಳಿ ಸಮಯ ಕೇಳುತ್ತೇನೆ. ಆದರೆ ಸದ್ಯಕ್ಕಂತೂ ಯಾವುದೇ ಪ್ರವಾಸ ನಿಗದಿಯಾಗಿಲ್ಲ ಎಂದು ವದಂತಿಗಳಿಗೆ ತೆರೆ ಎಳೆದರು.
ಹೈಕಮಾಂಡ್ ಈಗಾಗಲೇ ನಾಯಕತ್ವ ಬದಲಾವಣೆಗೆ ಮುಹೂರ್ತ ಫಿಕ್ಸ್ ಮಾಡಿದೆ ಎಂಬ ಮಾಧ್ಯಮಗಳ ವರದಿಗಳ ನಡುವೆ ಮುಖ್ಯಮಂತ್ರಿಗಳ ಈ ಹೇಳಿಕೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಇದು ಕೇವಲ ವದಂತಿ ಎಂಬ ಸಂದೇಶವನ್ನು ರವಾನಿಸಲು ಸಿಎಂ ಈ ಮೂಲಕ ಪ್ರಯತ್ನಿಸಿದ್ದಾರೆ.

