ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಸೆಪ್ಟೆಂಬರ್ 10ರಂದು 100 ದಿನಗಳನ್ನು ಪೂರೈಸಲಿದೆ.
ಈ ಹಿನ್ನೆಲೆಯಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸರ್ಕಾರದ ಶತದಿನದ ಸಂಭ್ರಮದ ವೇಳೆ ರೈತರು, ಯುವಜನರು ಸೇರಿದಂತೆ ವಿವಿಧ ವರ್ಗಗಳಿಗೆ ಹಲವು ಮಹತ್ವದ ಘೋಷಣೆಗಳನ್ನು ಮಾಡುವ ನಿರೀಕ್ಷೆ ಮೂಡಿದೆ.ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗ್ಯಾರಂಟಿ ಯೋಜನೆಗಳ ಸುಮಾರು 80 ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಮನೆ ಬಾಗಿಲಿಗೆ ನಮ್ಮ ಸರ್ಕಾರ’ಕ್ಕೆ ಒತ್ತು
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ‘ನುಡಿದಂತೆ ನಡೆದ ಸರ್ಕಾರ’ ಎಂಬುದು ಪ್ರಮುಖ ಆಡಳಿತದ ಹೆಗ್ಗುರುತಾಗಿತ್ತು.
ಇದೀಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮದೇ ಆದ ಆಡಳಿತದ ಹೆಜ್ಜೆ ಗುರುತು ಮೂಡಿಸುವ ನಿಟ್ಟಿನಲ್ಲಿ ‘ಮನೆ ಬಾಗಿಲಿಗೆ ನಮ್ಮ ಸರ್ಕಾರ’ ಎಂಬ ಫ್ಲ್ಯಾಗ್ಶಿಪ್ ಕಾರ್ಯಕ್ರಮದ ಮೂಲಕ ಹೊಸ ಯೋಜನೆಗಳು ಹಾಗೂ ಘೋಷಣೆಗಳಿಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಕೃಷಿ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಆದ್ಯತೆ
100 ದಿನಗಳ ಸಂಭ್ರಮದ ಕಾರ್ಯಕ್ರಮದಲ್ಲಿ ಕೃಷಿ, ಶಿಕ್ಷಣ, ಆರೋಗ್ಯ ಸೇರಿದಂತೆ ಕೆಲವು ಆದ್ಯತೆಯ ಕ್ಷೇತ್ರಗಳಿಗೆ ನಾಲ್ಕೈದು ಹೊಸ ಘೋಷಣೆಗಳು ಹೊರಬೀಳುವ ನಿರೀಕ್ಷೆಯಿದೆ.
ವಿಶೇಷವಾಗಿ ಬರ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ, ಯುವಜನರಿಗೆ ಅವಕಾಶಗಳು ಹಾಗೂ ವಿವಿಧ ವರ್ಗಗಳಿಗೆ ಅನುಕೂಲವಾಗುವ ಯೋಜನೆಗಳ ಕುರಿತು ಸರ್ಕಾರದ ಘೋಷಣೆ ಏನಿರಲಿದೆ ಎಂಬುದು ಕುತೂಹಲ ಮೂಡಿಸಿದೆ.


