ಸೇಡಂ: ಸುವರ್ಣ ಕರ್ನಾಟಕ ಪ್ರೆಸ್ ಅಸೋಸಿಯೇಷನ್, ಕರ್ನಾಟಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಲಬುರಗಿ ಇವರ ಸಹಯೋಗದಲ್ಲಿ “ಶಿಕ್ಷಣ ಸೇವಾ ರತ್ನ ಪ್ರಶಸ್ತಿ” ಪ್ರದಾನ ಸಮಾರಂಭವನ್ನು ದಿನಾಂಕ/23/08/2026ರಂದು ಕಲಬುರಗಿ ನಗರದ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಆಯೋಜಿಸಲಾಗಿದೆ.
ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದಿರುವ ಸಂಸ್ಥೆ (Reg. No. DRB4/SOR/94/2025-2026) ವತಿಯಿಂದ ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ಸಿದ್ಧಿಪೇಟ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಅನ್ನಪೂರ್ಣ ಎಸ್. ಬಾನರ ಅವರ ಶಿಕ್ಷಣ ಕ್ಷೇತ್ರದಲ್ಲಿನ ಗಮನಾರ್ಹ ಸೇವೆಯನ್ನು ಗುರುತಿಸಿ ಪ್ರತಿಷ್ಠಿತ “ಶಿಕ್ಷಣ ಸೇವಾ ರತ್ನ ಪ್ರಶಸ್ತಿ” ನೀಡಿ ಗೌರವಿಸಲಾಗುತ್ತಿದೆ.
ಶಿಕ್ಷಣ ಕ್ಷೇತ್ರವನ್ನು ಕೇವಲ ವೃತ್ತಿಯನ್ನಾಗಿ ಪರಿಗಣಿಸದೆ, ಅದನ್ನು ಸಮಾಜ ಸೇವೆಯಾಗಿ ಸ್ವೀಕರಿಸಿರುವ ಅನ್ನಪೂರ್ಣ ಎಸ್. ಬಾನರ ಅವರು ಹಲವು ವರ್ಷಗಳಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದ್ದಾರೆ. ಶಾಲೆಯ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ, ಅವರಲ್ಲಿರುವ ಪ್ರತಿಭೆ, ಆಸಕ್ತಿ ಹಾಗೂ ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ.
ಮಕ್ಕಳೊಂದಿಗೆ ಆತ್ಮೀಯವಾಗಿ ಬೆರೆಯುವ ಅನ್ನಪೂರ್ಣ ಬಾನರ ಅವರ ಸರಳತೆ, ಸೌಮ್ಯ ಸ್ವಭಾವ ಹಾಗೂ ಪ್ರೀತಿಯ ನಡೆ ವಿದ್ಯಾರ್ಥಿಗಳಲ್ಲಿ ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ. ಶಿಕ್ಷಕಿ–ವಿದ್ಯಾರ್ಥಿಗಳ ಸಂಬಂಧವನ್ನು ಕೇವಲ ಪಾಠ ಬೋಧನೆಗೆ ಸೀಮಿತಗೊಳಿಸದೆ, ಮಕ್ಕಳ ಸಮಸ್ಯೆಗಳನ್ನು ಆಲಿಸಿ, ಅವರಿಗೆ ಆತ್ಮವಿಶ್ವಾಸ ತುಂಬಿ, ಶಿಕ್ಷಣದ ಮಹತ್ವವನ್ನು ಮನವರಿಕೆ ಮಾಡಿಕೊಡುವ ಕೆಲಸವನ್ನು ಅವರು ನಿರಂತರವಾಗಿ ಮಾಡುತ್ತಿದ್ದಾರೆ.
ಪ್ರತಿಯೊಬ್ಬ ಮಗುವಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಆಶಯದೊಂದಿಗೆ ಶಾಲೆಯ ಶೈಕ್ಷಣಿಕ ವಾತಾವರಣವನ್ನು ಉತ್ತಮಗೊಳಿಸಲು ಅವರು ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಪಠ್ಯ ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಶಿಸ್ತು, ಉತ್ತಮ ಸಂಸ್ಕಾರ, ಸಾಮಾಜಿಕ ಜವಾಬ್ದಾರಿ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವತ್ತಲೂ ಗಮನ ಹರಿಸುತ್ತಿದ್ದಾರೆ.
ವಿದ್ಯಾರ್ಥಿಗಳ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ, ಅವರ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಯತ್ನ ಮಾಡುತ್ತಿರುವುದು ಪೋಷಕರು ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಶಾಲೆಯ ಅಭಿವೃದ್ಧಿ ಮತ್ತು ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಪೋಷಕರು ಹಾಗೂ ಸಮುದಾಯದ ಸಹಭಾಗಿತ್ವಕ್ಕೂ ಅವರು ಮಹತ್ವ ನೀಡುತ್ತಿದ್ದಾರೆ.
ಅನ್ನಪೂರ್ಣ ಎಸ್. ಬಾನರ ಅವರ ಶಿಕ್ಷಣ ಸೇವೆ, ಮಕ್ಕಳ ಮೇಲಿನ ಪ್ರೀತಿಭಾವ, ಕರ್ತವ್ಯನಿಷ್ಠೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆಯನ್ನು ಪರಿಗಣಿಸಿ “ಶಿಕ್ಷಣ ಸೇವಾ ರತ್ನ ಪ್ರಶಸ್ತಿ”ಗೆ ಆಯ್ಕೆ ಮಾಡಿರುವುದು ಶಿಕ್ಷಕ ವಲಯ, ಪೋಷಕರು ಹಾಗೂ ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.
ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅನ್ನಪೂರ್ಣ ಬಾನರ ಅವರು ಗಣ್ಯಮಾನ್ಯರು, ಶಿಕ್ಷಕರು, ಶಿಕ್ಷಣಾ ಪ್ರೇಮಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪ್ರಶಸ್ತಿ ಲಭಿಸುತ್ತಿರುವ ಹಿನ್ನೆಲೆಯಲ್ಲಿ ಗಣ್ಯರು ಹಾಗೂ ಸೇಡಂ ತಾಲೂಕಿನ ಶಿಕ್ಷಕ ಸಮುದಾಯದವರು ಅಭಿನಂದನೆ ಸಲ್ಲಿಸಿ, ಅವರ ಶೈಕ್ಷಣಿಕ ಸೇವೆ ಮುಂದಿನ ದಿನಗಳಲ್ಲಿಯೂ ಇದೇ ರೀತಿಯಲ್ಲಿ ಮುಂದುವರಿಯಲಿ ಎಂದು ಶುಭ ಹಾರೈಸಿದ್ದಾರೆ. ಮಕ್ಕಳ ಭವಿಷ್ಯವನ್ನು ರೂಪಿಸುವ ನಿಸ್ವಾರ್ಥ ಸೇವೆಗೆ ದೊರೆಯುತ್ತಿರುವ ಈ ಗೌರವವು ಅನ್ನಪೂರ್ಣ ಎಸ್. ಬಾನರ ಅವರ ಸೇವೆಗೆ ಮತ್ತಷ್ಟು ಪ್ರೇರಣೆ ನೀಡುವಂತಾಗಿದೆ.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.


