ಬೆಳಗಾವಿ : ದಕ್ಷಿಣ ಕಾಶಿ ಎಂದೇ ಪ್ರಖ್ಯಾತವಾಗಿರುವ ಕಪಿಲೇಶ್ವರ ದೇಗುಲದ ಹೊಂಡದಲ್ಲಿ (Pond) ಈಜಲು ಹೋಗಿದ್ದ ಇಬ್ಬರು ಅಪ್ರಾಪ್ತ ಬಾಲಕರು ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿರುವ (Crime) ಘಟನೆ ನಡೆದಿದೆ.
ಮೃತ ಬಾಲಕರನ್ನು ಶಿವಾಜಿ ನಗರದ ನಿವಾಸಿ ಶಿವಂ ಪರಶುರಾಮ ಸುಂಡೀಕರ್ (07 ವರ್ಷ) ಮತ್ತು ಶಾಹಾಪುರದ ಜೇಡಗಲ್ಲಿ ನಿವಾಸಿ ಪರಶುರಾಮ ರಾಜು ನೀಲಜಕರ್ (11 ವರ್ಷ) ಎಂದು ಗುರುತಿಸಲಾಗಿದೆ.
ರಜೆಯ ಮೋಜಿನಲ್ಲಿದ್ದ ಬಾಲಕರು ಆಟವಾಡುತ್ತಾ ಕಪಿಲೇಶ್ವರ ಹೊಂಡಕ್ಕೆ ಈಜಲು ಹೋದಾಗ ನೀರಿನ ಆಳ ತಿಳಿಯದೆ ಮುಳುಗಿದ್ದಾರೆ ಎನ್ನಲಾಗಿದೆ.
ಬಾಲಕರು ನೀರಿನಲ್ಲಿ ಮುಳುಗಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ ಮತ್ತು ಎಸ್‌ಡಿಆರ್‌ಎಫ್ (SDRF) ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಭಾರಿ ಕಾರ್ಯಾಚರಣೆ ನಡೆಸಿದರು. ಸತತ ಪ್ರಯತ್ನದ ನಂತರ ಬಾಲಕರ ಮೃತದೇಹಗಳನ್ನು ಹೊಂಡದಿಂದ ಹೊರತೆಗೆಯಲಾಯಿತು.
ಮೃತದೇಹಗಳನ್ನು ಹೊರಕ್ಕೆ ತರುತ್ತಿದ್ದಂತೆಯೇ ಪೋಷಕರು ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಅತೀ ಚಿಕ್ಕ ವಯಸ್ಸಿನಲ್ಲೇ ಮಕ್ಕಳನ್ನು ಕಳೆದುಕೊಂಡ ತಂದೆ-ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.
ಸ್ಥಳಕ್ಕೆ ಖಡೇಬಜಾರ್ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

