ಕಾಗವಾಡ : ತಾಲೂಕಿನ ಉಗಾರ ಬುದ್ರುಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬೇಡ್ಕರ್ ನಗರ, ಬುದ್ಧ ನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಯುವಕರು ಗ್ರಾಮ ಪಂಚಾಯತ್ ಕಚೇರಿ ಎದುರು ಮೌನ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಸ್ಥಳಕ್ಕೆ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಅಲ್ಲಾವುದ್ದೀನ್ ಅನ್ಸಾರಿ ಭೇಟಿ ನೀಡಿ ಪ್ರತಿಭಟನಾಕಾರರ ಮನವಿಯನ್ನು ಆಲಿಸಿ, ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು. ಆದರೆ ಪ್ರತಿಭಟನಾಕಾರರು ಇದಕ್ಕೆ ಒಪ್ಪದೇ, ಕಾರ್ಯನಿರ್ವಾಹಕ ಅಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಖುದ್ದಾಗಿ ವೀಕ್ಷಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾಕಾರರ ಒತ್ತಾಯಕ್ಕೆ ಸ್ಪಂದಿಸಿದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ವಾಲಿ ಗ್ರಾಮಕ್ಕೆ ಭೇಟಿ ನೀಡಿ, ಸಹಾಯಕ ನಿರ್ದೇಶಕ ಅಲ್ಲಾವುದ್ದೀನ್ ಅನ್ಸಾರಿ, ಪಿಡಿಒ,ನಾಗರಾಜ ಕಾಂಬಳೆ. ಕಾರ್ಯದರ್ಶಿ ಶಬ್ಬೀರ್ ತಾಂಬೋಳಿ.ಗ್ರಾಮ ಪಂಚಾಯತ್ ಸಿಬ್ಬಂದಿ ಹಾಗೂ ಗ್ರಾಮಸ್ಥರೊಂದಿಗೆ ವಿವಿಧ ಪ್ರದೇಶಗಳ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಶೀಲಿಸಿದರು.
ಈ ವೇಳೆ ಗ್ರಾಮಸ್ಥರು ಅಂಬೇಡ್ಕರ್ ನಗರದಲ್ಲಿನ ಚರಂಡಿ ದುರಸ್ತಿ, ಬೀದಿ ದೀಪಗಳ ಅಳವಡಿಕೆ, ಕಸ ವಿಲೇವಾರಿಯಲ್ಲಿನ ವಿಳಂಬ ನಿವಾರಣೆ ಸೇರಿದಂತೆ ಹಲವು ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು. ಅಲ್ಲದೆ, ಗ್ರಾಮದ ಹೃದಯಭಾಗದಲ್ಲಿರುವ ಬಸ್ ನಿಲ್ದಾಣದ ಸಮೀಪದ ಹಳೆಯ ಸಾರ್ವಜನಿಕ ಮೂತ್ರಾಲಯವನ್ನು ತೆರವುಗೊಳಿಸಿ ಅದರ ಸ್ಥಳದಲ್ಲಿ ಹೊಸ ಸುಸಜ್ಜಿತ ಕಟ್ಟಡ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಇದಲ್ಲದೆ, ಶಿರಗುಪ್ಪಿ ರಸ್ತೆಯಲ್ಲಿದ್ದ ಮಹಿಳಾ ಸಾರ್ವಜನಿಕ ಶೌಚಾಲಯವನ್ನು ಕೆಡವಿದ ಬಳಿಕ ಹಲವು ತಿಂಗಳು ಕಳೆದರೂ ಹೊಸ ಕಟ್ಟಡ ನಿರ್ಮಿಸದಿರುವುದನ್ನು ಪ್ರಶ್ನಿಸಿ, ಶೀಘ್ರ ಕಾಮಗಾರಿ ಆರಂಭಿಸುವಂತೆ ಆಗ್ರಹಿಸಿದರು.
ಬುದ್ಧ ನಗರದಲ್ಲಿ ರಸ್ತೆಯ ಮೇಲೆ ಇರಿಸಿರುವ ಕಟ್ಟಿಗೆ ಹಾಗೂ ಸಾರ್ವಜನಿಕರು ಅತಿಕ್ರಮಿಸಿಕೊಂಡಿರುವ ಜಾಗವನ್ನು ತೆರವುಗೊಳಿಸಿ ರಸ್ತೆ ಅಗಲೀಕರಣ ಮಾಡಿ ಸುಗಮ ರಸ್ತೆ ನಿರ್ಮಿಸಬೇಕು ಎಂದು ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದರು.
ಸ್ಥಳ ಪರಿಶೀಲನೆಯ ಬಳಿಕ ಮಾತನಾಡಿದ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ವಾಲಿ, "ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಚರಂಡಿ ಸ್ವಚ್ಛತೆ, ಕಸ ವಿಲೇವಾರಿ ಸೇರಿದಂತೆ ತುರ್ತು ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸಲಾಗುವುದು. ಉಳಿದ ಅಭಿವೃದ್ಧಿ ಕಾಮಗಾರಿಗಳನ್ನು ಅನುದಾನದ ಲಭ್ಯತೆ ಪರಿಶೀಲಿಸಿ ಹಂತ ಹಂತವಾಗಿ ಕೈಗೊಳ್ಳಲಾಗುವುದು" ಎಂದು ಭರವಸೆ ನೀಡಿ ಮನವಿ ಸ್ವೀಕರಿಸಿದರು.
ನಂತರ ಪ್ರತಿಭಟನಾಕಾರರ ಪರವಾಗಿ ಮಲ್ಲು ಮದಲಮಟ್ಟಿ ಮಾತನಾಡಿ, "ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲಿಸಿರುವುದು ಸಂತಸದ ವಿಷಯ. ಅವರು ನೀಡಿರುವ ಭರವಸೆಯನ್ನು ಗೌರವಿಸಿ ಹಾಗೂ ಕಾಲಾವಕಾಶ ನೀಡಿ ಸದ್ಯಕ್ಕೆ ನಮ್ಮ ಹೋರಾಟವನ್ನು ಹಿಂಪಡೆಯುತ್ತಿದ್ದೇವೆ. ಆದರೆ ನಿಗದಿತ ಅವಧಿಯಲ್ಲಿ ಕಾಮಗಾರಿಗಳು ಆರಂಭವಾಗದಿದ್ದರೆ ಮತ್ತೆ ಉಗ್ರ ಹೋರಾಟ ನಡೆಸಲಾಗುವುದು" ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ನ್ಯಾಯವಾದಿ ಅರುಣ ಗಸ್ತಿ.ಮಲ್ಲು ಮದಲಮಟ್ಟಿ, ಅನಿಲ್ ಗಸ್ತಿ, ಶೀತಲ್ ಕುಂಬಾರ, ಅರುಣ್ ಗಸ್ತಿ, ಸುನಿಲ್ ಮಾಂಗ, ಸದಾಶಿವ ಕಾಂಬ್ಳೆ, ಓಂಕಾರ್ ರೋಹಿದಾಸ್, ಗಣೇಶ್ ಕಾಂಬ್ಳೆ, ರಾಜು ದುರ್ಗಮರು, ಗಿರೀಶ್ ಕಾಂಬ್ಳೆ, ಮಹಾಂತೇಶ್ ತಳವಾರ್, ಯೋಗೇಶ್ ಕಾಂಬ್ಳೆ, ಸೂರಜ್ ಕಾಂಬ್ಳೆ, ಸಾಗರ್ ಪೂಜಾರಿ, ಪ್ರೀತಮ್ ಬಿರನಿಗೆ, ಶೀತಲ್ ಹನಕಾಂಬಳೆ ಹಾಗೂ ರಾಹುಲ್ ಕಾಂಬ್ಳೆ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.


