ಬಾಗಲಕೋಟೆ: ಕೇವಲ ಕ್ರಿಕೆಟ್ ಆಡುವಾಗ ಚೆಂಡು ಮಹಿಳೆಯೊಬ್ಬರಿಗೆ ತಗುಲಿದ ಎಂಬ ಸಣ್ಣ ಕಾರಣಕ್ಕೆ ಇಬ್ಬರು ಶಾಲಾ ಬಾಲಕರನ್ನು ಸ್ಥಳೀಯರು ಅಮಾನುಷವಾಗಿ ಥಳಿಸಿರುವ ಆಘಾತಕಾರಿ ಘಟನೆಯೊಂದು ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದ್ದು, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಭಾನುವಾರ ಶಾಲಾ ಆವರಣದಲ್ಲಿ ಮಕ್ಕಳು ಕ್ರಿಕೆಟ್ ಆಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಆಟವಾಡುವಾಗ ಕ್ರಿಕೆಟ್ ಬಾಲ್ ಆಕಸ್ಮಿಕವಾಗಿ ಹತ್ತಿರದಲ್ಲಿದ್ದ ಮಹಿಳೆಗೆ ತಗುಲಿದೆ ಎನ್ನಲಾಗಿದೆ.
ಇದರಿಂದ ಕೋಪಗೊಂಡ ಸ್ಥಳೀಯರ ಗುಂಪೊಂದು ಕೇವಲ 14 ವರ್ಷದ ಅಪ್ರಾಪ್ತ ಬಾಲಕ ಸೇರಿದಂತೆ ಇಬ್ಬರು ಮಕ್ಕಳನ್ನು ಶಾಲೆಯ ಕಿಟಿಕಿಗೆ ಕಟ್ಟಿಹಾಕಿ, ಕೈ ಹಾಗೂ ಚಪ್ಪಲಿಗಳಿಂದ ಕ್ರೂರವಾಗಿ ಥಳಿಸಲಾಗಿದೆ. ಹಲ್ಲೆಯಿಂದಾಗಿ ಇಬ್ಬರೂ ಮಕ್ಕಳು ಗಾಯಗೊಂಡಿದ್ದು, ಸದ್ಯ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ನಂತರ ಮಕ್ಕಳ ಪೋಷಕರು ನೀಡಿದ ದೂರಿನ ಮೇರೆಗೆ ಕೇರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳನ್ನು ರೇಣುಕಾ ಶರಣರ, ಬಸವರಾಜ್ ಶರಣರ ಮತ್ತು ಅಭಿ ಲಮಾಣಿ ಎಂದು ಗುರುತಿಸಿದ್ದಾರೆ.


