ಭಾಲ್ಕಿ: ರಾಜ್ಯ ಸರ್ಕಾರ ಇತ್ತೀಚೆಗೆ ಪ್ರಕಟಿಸಿರುವ ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಭಾಲ್ಕಿ ತಾಲೂಕನ್ನು ಕೈಬಿಟ್ಟಿರುವುದು ತಾಲೂಕಿನ ರೈತರಿಗೆ ಮಾಡಿರುವ ಘೋರ ಅನ್ಯಾಯವಾಗಿದೆ. ಈ ನಿರ್ಧಾರಕ್ಕೆ ಕಾರಣವೇನು ಎಂಬುದನ್ನು ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಅವರು ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಭಾಲ್ಕಿ ಮಂಡಲ ಅಧ್ಯಕ್ಷ ವೀರಣ್ಣ ಕಾರಬಾರಿ ಆಗ್ರಹಿಸಿದ್ದಾರೆ.
ಭಾಲ್ಕಿ ತಾಲೂಕಿನಲ್ಲಿ ಪ್ರಸಕ್ತ ವರ್ಷ ಮಳೆಯ ಕೊರತೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೂನ್ ತಿಂಗಳಲ್ಲಿ ಅಲ್ಪ ಪ್ರಮಾಣದ ಮಳೆಯಾದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಬಹುದು ಎಂಬ ನಿರೀಕ್ಷೆಯಿಂದ ಅನೇಕ ರೈತರು ಬಿತ್ತನೆ ಮಾಡಿದ್ದರು. ಆದರೆ, ನಂತರ ಮಳೆ ಕೈಕೊಟ್ಟ ಪರಿಣಾಮ ಬಿತ್ತನೆ ಮಾಡಿದ ಬೆಳೆಗಳು ಒಣಗಿ ನಾಶವಾಗುವಂತಾಗಿದೆ. ಜುಲೈ ಅಂತ್ಯದಲ್ಲಿ ಮತ್ತೆ ಅಲ್ಪ ಪ್ರಮಾಣದ ಮಳೆ ಬಂದಾಗ ಕೆಲ ರೈತರು ಮರುಬಿತ್ತನೆ ಮಾಡಿದರೆ, ಇನ್ನು ಕೆಲವರು ಬಿತ್ತನೆ ಮಾಡದೇ ಉಳಿದಿದ್ದಾರೆ. ಜುಲೈನಲ್ಲಿ ಮೊದಲ ಬಾರಿಗೆ ಬಿತ್ತನೆ ಮಾಡಿದ ರೈತರ ಬೆಳೆಗಳ ಬೆಳವಣಿಗೆಯೂ ಮಳೆಯ ಕೊರತೆಯಿಂದ ಕುಂಠಿತಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ರೈತರು ಜಮೀನು ಉಳುಮೆ, ಬಿತ್ತನೆ, ಬೀಜ, ಗೊಬ್ಬರ, ಔಷಧಿ ಹಾಗೂ ಕಳೆ ತೆಗೆಯುವುದು ಸೇರಿದಂತೆ ಪ್ರತಿ ಎಕರೆಗೆ ಕನಿಷ್ಠ ₹25 ಸಾವಿರಕ್ಕೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ. ಬೆಳೆ ಕೈಕೊಟ್ಟರೆ ಈ ಸಂಪೂರ್ಣ ಹಣ ನಷ್ಟವಾಗುವುದರ ಜೊತೆಗೆ ರೈತರು ಸಾಲದ ಸುಳಿಗೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ರೈತರ ನೆರವಿಗೆ ನಿಲ್ಲಬೇಕಾದ ಸರ್ಕಾರವೇ ಭಾಲ್ಕಿ ತಾಲೂಕನ್ನು ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿರುವುದು ಖಂಡನೀಯ ಎಂದಿದ್ದಾರೆ.
ಈ ಹಿಂದೆ ಬಿಜೆಪಿ ಭಾಲ್ಕಿ ಮಂಡಲದ ವತಿಯಿಂದ ಮಾಜಿ ಶಾಸಕ ಪ್ರಕಾಶ ಖಂಡ್ರೆ ಅವರ ನೇತೃತ್ವದಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿ, ರೈತರೊಂದಿಗೆ ಸಮಾಲೋಚನೆ ನಡೆಸಿ ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸಲಾಗಿತ್ತು. ಭಾಲ್ಕಿ ತಾಲೂಕನ್ನು ಬರಪೀಡಿತ ಎಂದು ಘೋಷಿಸುವುದು, ರೈತರಿಗೆ ಮಹಾರಾಷ್ಟ್ರ ಸರ್ಕಾರದ ಮಾದರಿಯಲ್ಲಿ ₹2 ಲಕ್ಷದವರೆಗೆ ಸಾಲಮನ್ನಾ ಮಾಡುವುದು ಹಾಗೂ ಬೆಳೆ ನಷ್ಟಕ್ಕೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಲಾಗಿತ್ತು ಎಂದು ವೀರಣ್ಣ ಕಾರಬಾರಿ ತಿಳಿಸಿದ್ದಾರೆ.
*“ಭಾಲ್ಕಿ ತಾಲೂಕಿನ ರೈತರ ಜಮೀನುಗಳಲ್ಲಿ ಬೆಳೆಗಳು ಒಣಗುತ್ತಿರುವುದು ಕಣ್ಣಿಗೆ ಕಾಣುತ್ತಿದ್ದರೂ ಸರ್ಕಾರ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಭಾಲ್ಕಿಯನ್ನು ಸೇರಿಸದಿರುವುದು ಅಚ್ಚರಿಯ ಸಂಗತಿ. ಜಿಲ್ಲಾ ಉಸ್ತುವಾರಿ ಸಚಿವರ ಮೌನ ನೋಡಿದರೆ ಅವರ ಪ್ರಕಾರ ಭಾಲ್ಕಿಯಲ್ಲಿ ಬೆಳೆ ಸಮೃದ್ಧವಾಗಿ ಬೆಳೆದು ರೈತರು ಸಂತೋಷದಲ್ಲಿದ್ದಾರೆಯೇ ಎಂಬ ಪ್ರಶ್ನೆ ಮೂಡುತ್ತದೆ. ಈ ಕುರಿತು ಸಚಿವ ಈಶ್ವರ ಖಂಡ್ರೆ ಅವರು ಜನತೆಗೆ ಸ್ಪಷ್ಟ ಉತ್ತರ ನೀಡಬೇಕು”* ಎಂದು ಅವರು ಒತ್ತಾಯಿಸಿದ್ದಾರೆ.
ಸರ್ವರಿಗೂ ಅನ್ನ ನೀಡುವ ರೈತ ಸಂಕಷ್ಟದಲ್ಲಿರುವಾಗ ಸರ್ಕಾರ ರಾಜಕೀಯ ಭೇದ ಮರೆತು ರೈತರ ನೆರವಿಗೆ ಧಾವಿಸಬೇಕು. ಕೂಡಲೇ ಭಾಲ್ಕಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ, ರೈತರಿಗೆ ಪ್ರತಿ ಎಕರೆಗೆ ₹50 ಸಾವಿರ ಬೆಳೆ ಪರಿಹಾರ ಹಾಗೂ ಸಂಪೂರ್ಣ ಸಾಲಮನ್ನಾ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಬಿಜೆಪಿ ಭಾಲ್ಕಿ ಮಂಡಲವು ರೈತರೊಂದಿಗೆ ಸೇರಿ *ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯಲಿದೆ* ಎಂದು ವೀರಣ್ಣ ಕಾರಬಾರಿ ಎಚ್ಚರಿಕೆ ನೀಡಿದ್ದಾರೆ.
ವರದಿ : ಸಂತೋಷ ಬಿಜಿ ಪಾಟೀಲ


