ಬೆಳಗಾವಿ: ಮಾಹಾರಾಷ್ಟ್ರದ ಪಶ್ಚಿಮಘಟ್ಟ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಪರಿಣಾಮ ಗಡಿ ಜಿಲ್ಲೆ ಬೆಳಗಾವಿಯಲ್ಲಿ ವರುಣಾರ್ಭಟದ ಜೊತೆಗೆ ನದಿಗಳು ಮೈದುಂಬಿ ಹರಿಯುತ್ತಿವೆ.
ಕೃಷ್ಣಾ ನದಿ ಹಾಗೂ ಪಂಚಗಂಗಾ ನದಿ ಅಬ್ಬರಕ್ಕೆ ಪ್ರಸಿದ್ದ ಧಾರ್ಮಿಕ ಕ್ಷೇತ್ರ ಸಂಗಮೇಶ್ವರ ಮಂದಿರ ಮುಳಗುವ ಹಂತಕ್ಕೆ ತಲುಪಿದೆ.
ಕೃಷ್ಣಾ ಮತ್ತು ಪಂಚಗಂಗಾ ನದಿಗಳ ನೀರಿನ ಮಟ್ಟದಲ್ಲಿ ಕಳೆದ 24 ಗಂಟೆಗಳಲ್ಲಿ ಭಾರಿ ಏರಿಕೆಯಾಗಿದೆ.
ನದಿಗಳ ನೀರಿನ ಮಟ್ಟ ಬರೋಬ್ಬರಿ 10 ಅಡಿಗಳಷ್ಟು ಹೆಚ್ಚಾಗಿದ್ದು, ಪ್ರವಾಹದ ನೀರು ಇಲ್ಲಿನ ಪ್ರಸಿದ್ಧ ದತ್ತ ಮಂದಿರದ ಸಮೀಪಕ್ಕೆ ಬಂದು ತಲುಪಿದೆ.
ನದಿಯ ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ದತ್ತ ದೇವಸ್ಥಾನದ ಆಡಳಿತ ಮಂಡಳಿ ಹೈ ಅಲರ್ಟ್ ಘೋಷಿಸಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ನದಿ ದಡದಲ್ಲಿರುವ ದೇವಸ್ಥಾನದ ಸಾಹಿತ್ಯ ಹಾಗೂ ಇತರ ವಸ್ತುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.
ಇದೇ ವೇಳೆ ಕೃಷ್ಣಾ ಮತ್ತು ಪಂಚಗಂಗಾ ನದಿಗಳ ಸಂಗಮದಲ್ಲಿರುವ ಪ್ರಸಿದ್ಧ ಸಂಗಮೇಶ್ವರ ದೇವಾಲಯವು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿದ್ದು, ಭಕ್ತರು ಹಾಗೂ ನದಿ ಪಾತ್ರದ ಜನರಲ್ಲಿ ಆತಂಕ ಮೂಡಿಸಿದೆ.
ಮತ್ತೊಂದೆಡೆ ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನಿಪ್ಪಾಣಿ ತಾಲೂಕಿನಲ್ಲಿ ಪ್ರವಾಹದ ಭೀತಿ ಎದುರಾಗಿದೆ.
ಪ್ರಮುಖ ನದಿಗಳಾದ ದೂಧಗಂಗಾ ಮತ್ತು ವೇದಗಂಗಾ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಮೂರು ಪ್ರಮುಖ ಸಂಪರ್ಕ ಸೇತುವೆಗಳು ಸಂಪೂರ್ಣವಾಗಿ ಮುಖುಗಡೆಯಾಗಿವೆ.
ದೂಧಗಂಗಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಕಾರದಗಾ-ಬೋಜ್ ಸಂಪರ್ಕಿಸುವ ಸೇತುವೆ ಮುಳುಗಡೆಯಾಗಿದೆ. ಇತ್ತ ವೇದಗಂಗಾ ನದಿಯ ಆರ್ಭಟಕ್ಕೆ ಬಾರವಾಡ-ಕನ್ನೂರ ಹಾಗೂ ಬೋಜವಾಡಿ-ಗಜವರವಾಡಿ ಗ್ರಾಮಗಳನ್ನು ಸಂಪರ್ಕಿಸುವ ಸೇತುವೆಗಳು ನೀರಿನಲ್ಲಿ ಮುಳುಗಿವೆ. ಇದರಿಂದಾಗಿ ಸುತ್ತಮುತ್ತಲಿನ ಹಳ್ಳಿಗಳ ಸಂಪರ್ಕ ಕಡಿತಗೊಂಡಿದ್ದು ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.


