ಬೆಂಗಳೂರು: ಮಧ್ಯ ಪ್ರಾಚ್ಯ ದೇಶಗಳ ರೀತಿಯಲ್ಲಿ ಭಾರತದಲ್ಲಿಯೂ ಕೈಕಾಲು ಕತ್ತರಿಸುವ ಶಿಕ್ಷೆ ಇದ್ದರಷ್ಟೇ ಜನರು ಕಾನೂನು ಪಾಲಿಸುತ್ತಾರೆನೋ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಆರ್. ನಟರಾಜ್ ವಿಚಾರಣೆ ವೇಳೆ ಅಭಿಪ್ರಾಯಪಟ್ಟಿದ್ದಾರೆ.
ರಜಾ ಕಾಲದ ಏಕ ಸದಸ್ಯ ನ್ಯಾಯ ಪೀಠದಲ್ಲಿದ್ದ ಅವರು ಅತ್ಯಾಚಾರ ಆರೋಪದಡಿ ಬಂಧಿತನಾಗಿರುವ ತೆಲಂಗಾಣದ 23 ವರ್ಷದ ಯುವಕ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ವೇಳೆ ಈ ರೀತಿ ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೇ, ಆರೋಪಿತ ಯುವಕನಿಗೆ ಜಾಮೀನು ನಿರಾಕರಿಸಿದ್ದಾರೆ. ನಮ್ಮ ಪ್ರಜಾಪ್ರಭುತ್ವದಲ್ಲಿ ಅಪರಾಧ ಎಸಗುವುದು ಸಲೀಸಾಗಿಬಿಟ್ಟಿದೆ. ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ ಇರುವ ಕಾರಣ ನಮ್ಮ ಕಾನೂನುಗಳು ಹಲ್ಲು ಕಳೆದುಕೊಂಡಿವೆ.
ಬಹುಶಃ ಮಧ್ಯಪ್ರಾಚ್ಯ ದೇಶಗಳಲ್ಲಿ ನೀಡಲಾಗುವ ಕಠಿಣ ಶಿಕ್ಷೆಯನ್ನು ನಮ್ಮಲ್ಲಿಯೂ ತಪ್ಪಿತಸ್ಥರಿಗೆ ನೀಡುವಂತಾದರೆ ನಮ್ಮ ಜನ ತಕ್ಕ ರೀತಿಯಲ್ಲಿ ಕಾನೂನು ಪಾಲಿಸುತ್ತಾರೆ ಎಂದು ಹೇಳಿದ್ದಾರೆ.
ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು. ಅರ್ಜಿದಾರ ನಾಲ್ಕೈದು ದಿನ ಜೈಲಿನಲ್ಲಿರಲಿ ಬಿಡಿ. ಜೈಲಿನ ಅನುಭವವಾಗಲಿ ಎಂದು ನ್ಯಾಯಮೂರ್ತಿಗಳು ಹೇಳಿದ್ದು, ವಿಚಾರಣೆಯನ್ನು ಜೂನ್ 8ಕ್ಕೆ ಮುಂದೂಡಿದ್ದಾರೆ.


