ಸಿರುಗುಪ್ಪ : ತಾಲೂಕಿನ ನಂ.64 ಹಳೇಕೋಟೆ ಗ್ರಾಮದ ಆರಾಧ್ಯ ದೈವ ಶ್ರೀ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವ ಬುಧವಾರ ಬೆಳಗಿನ ಜಾವ 6 ಗಂಟೆಗೆ ಅದ್ದೂರಿಯಾಗಿ ಜರುಗಿತು.
ಜಾತ್ರೆಯ ಹಿಂದಿನ ದಿನವಾದ ಮಂಗಳವಾರದಂದು ಗ್ರಾಮದಲ್ಲಿ ಭಕ್ತರು ಕಾಯಿ ಕರ್ಪೂರ ಎಡೆ ನೈವೇದ್ಯ ಸಮರ್ಪಿಸಿದರು.
ದೇವಸ್ಥಾನದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ವಿವಿಧ ಫಲ, ಪುಷ್ಪಗಳ ಆಭರಣಗಳಿಂದ ಅಲಂಕರಿಸಿ ಮಹಾಮಂಗಳಾರತಿ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.ಗ್ರಾಮದ ಮುಖ್ಯ ದ್ವಾರದಿಂದ ವಿದ್ಯುದ್ದೀಪಗಳಿಂದ ಅಲಂಕಾರ ಮಾಡಲಾಗಿತ್ತು.
ಗ್ರಾಮದ ಸುತ್ತಮುತ್ತಲಿನ ತೆಕ್ಕಲಕೋಟೆ, ನಿಟ್ಟೂರು, ಹೆರಕಲ್, ಕೆಂಚನಗುಡ್ಡ, ಅರಳಿಗನೂರು, ಪಪ್ಪನಹಾಳ್, ದೇವಲಾಪುರ ಗ್ರಾಮಗಳಿಂದ ಪಾದಯಾತ್ರೆ ಮೂಲಕವೇ ಆಗಮಿಸುತ್ತಾರೆ.ರಾಜ್ಯ ಮತ್ತು ನೆರೆಯ ಆಂದ್ರಪ್ರದೇಶದ ಗಡಿಭಾಗದಲ್ಲೂ ಸ್ವಾಮಿಗೆ ಅಪಾರ ಭಕ್ತವೃಂದವಿದ್ದು, ಎರಡು ದಿನಗಳ ಕಾಲ ದೇವಸ್ಥಾನದಲ್ಲಿ ತಂಗುವ ಮೂಲಕ ಜವಳ, ದೀಡ್‌ನಮಸ್ಕಾರ, ತೊಟ್ಟಿಲು ಸೇವೆಯಂತಹ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಮದ್ಯರಾತ್ರಿ 12 ಗಂಟೆಯಿಂದ ಅಗ್ನಿಕುಂಡಕ್ಕೆ ಜೋಡಿಸಲಾದ ಕಟ್ಟಿಗೆ ರಾಶಿಗೆ ಅಗ್ನಿ ಹೊತ್ತಿಸಿ ಸುಮಾರು ಬೆಳಗಿನ ಜಾವ 3ಗಂಟೆಗೆ ಇಷ್ಟಾರ್ಥಗಳನ್ನು ನೆರವೇರಿಸುವ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ನಮನ ಸಲ್ಲಿಸಿದ ಶ್ರೀ ವೀರಭದ್ರೇಶ್ವರ ವೇಷಧಾರಿ ಕಾಶಯ್ಯ ಹಾಗೂ ಆರ್ಚಕರೊಂದಿಗೆ ಅಗ್ನಿ ಪ್ರವೇಶ ಕಾರ್ಯಕ್ರಮದಲ್ಲಿ ಭಾಗಿಯಾದರು.
ಭಕ್ತರು ಬೃಹತ್ ಹೂಹಾರಗಳನ್ನು ರಥಕ್ಕೆ ಸಮರ್ಪಣೆ ಮಾಡಿದ ನಂತರ ಬೆಳಗಿನ ಜಾವ 5ಗಂಟೆಯಿಂದ ವಿಶೇಷ ಪೂಜೆಗೈದು ನಡೆಯುವ ರಥೋತ್ಸವಕ್ಕೆ ಸಹಸ್ರಾರು ಭಕ್ತರು ಹೂಹಣ್ಣು ಎಸೆದು ನಮಿಸಿದರು.
ವರದಿ : ಶ್ರೀನಿವಾಸ ನಾಯ್ಕ