Join The Telegram | Join The WhatsApp |
ಬೆಳಗಾವಿ: ಭ್ರಷ್ಟಾಚಾರದ ಬಗ್ಗೆ ಸದನದಲ್ಲಿ ಚರ್ಚೆ ಮಾಡುವುದಕ್ಕೆ ಬಿಜೆಪಿ ಸರ್ಕಾರ ತಪ್ಪಿಸಿಕೊಳ್ಳುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಗುಡುಗಿದರು.
ಬೆಳಗಾವಿ ಚಳಿಗಾಲದ ಅಧಿವೇಶನ ಮುಗಿಸಿಕೊಂಡು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಒಂದಲ್ಲ ಒಂದು ನೆಪವನ್ನು ಹೇಳಿ ಸರ್ಕಾರ ಮತ್ತು ಸ್ಪೀಕರ್ ಭ್ರಷ್ಟಾಚಾರದ ಬಗ್ಗೆ ಚರ್ಚೆಗೆ ಬರುತ್ತಿಲ್ಲ.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಡಿರುವ ಆರೋಪ ಅಷ್ಟೇ ಅಲ್ಲ, ಸರ್ಕಾರವು ಎಲ್ಲಾ ಇಲಾಖೆಯಲ್ಲಿ ಭ್ರಷ್ಟಾಚಾರ ಮಾಡಿದೆ. ಆಡು ಮುಟ್ಟದ ಸೊಪ್ಪಿಲ್ಲ, ಭ್ರಷ್ಟಾಚಾರ ಮಾಡದ ಇಲಾಖೆ ಇಲ್ಲ ಎಂಬಂತಾಗಿದೆ. ಇವರ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. 50 ಪರ್ಸೆಂಟೇಜ್ ಮಾತ್ರವಲ್ಲದೇ ಪ್ರತಿಶತ ನೂರಷ್ಟು ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದರು.
ಹೇಮಾವತಿ ಎಡದಂಡೆ ನಾಲೆಯಲ್ಲಿ ಕೆಲಸ ಮಾಡದೇ ಬಿಲ್ ತೆಗೆದಿದ್ದಾರೆ. ನಾರಾಯಣಪುರ ಬಲದಂಡೆ ನಾಲೆ ಕಾಮಗಾರಿಯಲ್ಲಿ 2000 ಚಿಲ್ಲರೆ ಕೋಟಿ ರೂಪಾಯಿ ಭ್ರಷ್ಟಾಚಾರ ಆಗಿದೆ.
ಇದನ್ನೆಲ್ಲಾ ಸದನದಲ್ಲಿ ಚರ್ಚೆ ಮಾಡಬೇಕಾದರೆ, ನಮಗೆ ಅವಕಾಶವನ್ನೇ ಕೊಡುತ್ತಿಲ್ಲ. ಸರ್ಕಾರದ ಕುಮ್ಮಕ್ಕು ಇಲ್ಲದೇ ಇಷ್ಟು ದೊಡ್ಡ ಮಟ್ಟದ ಹಗರಣ ನಡೆಯಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಸದನದಲ್ಲಿ ಚರ್ಚೆ ಮಾಡಿದರೆ ಸಿಕ್ಕಿ ಹಾಕಿಕೊಳ್ಳುತ್ತೇವೆ ಎಂದು ಭಯದಿಂದ ಸದನವನ್ನು ಮೊಟಕುಗೊಳಿಸಿದ್ದಾರೆ. ಭ್ರಷ್ಟಾಚಾರದ ವಿಚಾರ ತಪ್ಪಿಸಲು ಸ್ಪೀಕರ್ ಸಹ ಸರ್ಕಾರಕ್ಕೆ ಸಹಾಯ ಮಾಡುತ್ತಿದ್ದಾರೆ.
ನನ್ನ ರಾಜಕೀಯ ಜೀವನದಲ್ಲಿ ಇಂತಹ ಭ್ರಷ್ಟ ಸರ್ಕಾರವನ್ನು ನೋಡಿಲ್ಲ. ಆರೋಪ ಮಾಡಿದವರನ್ನೇ ಸರ್ಕಾರ ಬಂಧಿಸುತ್ತದೆ, ಇದು ಎಂತಹ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
Join The Telegram | Join The WhatsApp |