Join The Telegram | Join The WhatsApp |
ಕೊಪ್ಪಳ:ಮರಳು ಗಣಿಗಾರಿಕೆ, ದಾಸ್ತಾನು, ಹಾಗೂ ಸಾಗಾಣಿಕೆಗೆ ಸಂಬಂಧಿಸಿದಂತೆ ನಿಯಮಗಳು ಇದ್ದರು ಸಹ ಅವುಗಳನ್ನು ಲೆಕ್ಕಿಸಿದೆ ಅನಧಿಕೃತವಾಗಿ ಹಾಡುಹಗಲೆ ಮರಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದರು ಸಹ ಅಧಿಕಾರಿಗಳು ಮಾತ್ರ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬುದು ನಿವಾಸಿಗಳು ಆರೋಪ ವಾಗಿದೆ.
ಪಟ್ಟಣದ ಸುತ್ತ-ಮುತ್ತ ಸೇರಿ ಇತರೆ ಗ್ರಾಮಗಳಲ್ಲಿ ಟ್ರ್ಯಾಕ್ಟರ್ ಗಳ ಮೂಲಕ ಯಾವುದೇ ಪರವಾನಿಗೆ ಇಲ್ಲದೇ ಹಳ್ಳಗಳಲ್ಲಿ ಮತ್ತು ಕೆಲ ಪಟ್ಟಾ ಜಮೀನುಗಳಲ್ಲಿ ಸಿಗುವ ಹೇರಳವಾದ ಮರಳನ್ನು ಎತ್ತುವಳಿ ಮಾಡುತ್ತಿರುವುದು ಸಾಮಾನ್ಯವಾಗಿದೆ.
ಜಿಲ್ಲೆಯ ಯಲಬುರ್ಗಾ ಪಟ್ಟಣದ ಮೀನಾಕ್ಷಿ ನಗರ, ಗೌಂಡಿ ಸಂಘದ ಲೇಔಟ್ ಗಳ ಸಮೀಪವಿರುವ ಹಳ್ಳ ಹಾಗೂ ಮುಧೋಳ, ಸಂಗನಹಾಲ, ಮಲ್ಕಸಮುದ್ರ, ಕಲ್ಲೂರ, ಚಿಕ್ಕಮ್ಯಾಗೇರಿ ಸೇರಿದಂತೆ ಇನ್ನಿತರ ಕಡೆಯಲ್ಲಿನ ಹಳ್ಳಗಳಲ್ಲಿ ಸಿಗುವ ಮರಳನ್ನು ಪರವಾನಿಗೆ ಇಲ್ಲದೇ ಕಾನೂನು ನಿಯಮಗಳನ್ನು ಉಲ್ಲಂಘಿಸಿ, ಪೊಲೀಸ್ ರ ಕಣ್ಣತ್ತಪ್ಪಿಸಿ ದಿನಾಲು ಟ್ರ್ಯಾಕ್ಟರ್ ಗಳಲ್ಲಿ ಮರಳು ಸಾಗಾಣಿಕೆ ನಡೆದಿದ್ದು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಇದನ್ನು ತಡೆಗಟ್ಟುವಲ್ಲಿ ಮುಂದಾಗಬೇಕು ಎಂದು ಜನರ ಆಗ್ರಹವಾಗಿದೆ.
ರಸ್ತೆಗಳು ಹಾಳು : ಪಟ್ಟಣದ ಮೀನಾಕ್ಷಿ ನಗರ, ಗೌಂಡಿ ಸಂಘದ ಪ್ಲಾಟಗಳಲ್ಲಿರುವ ರಸ್ತೆಗಳಲ್ಲಿ ದಿನನಿತ್ಯ ಮರಳು ತುಂಬಿದ ಟ್ರ್ಯಾಕ್ಟರ್ ಗಳು ಓಡಾಡುತ್ತಿರುವದರಿಂದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ದೊಡ್ಡ ದೊಡ್ಡ ತಗ್ಗು-ದಿಣ್ಣೆಗಳು ಬಿದ್ದು ಜನ ತಿರುಗಾಡುವುದು ಕಷ್ಟವಾಗಿದೆ. ಅಲ್ಲದೇ ಈ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು ಸಹ ಯಾರ ಭಯ,ಅಂಜಿಕೆ ಇಲ್ಲದೆ ಅಕ್ರಮ ಮರಳು ಸಾಗಾಟ ಅವ್ಯಾಹತವಾಗಿ ನಡೆದಿದೆ.
ಅಧಿಕಾರಿಗಳಿಗೆ ಒತ್ತಡ :
ಅನಧಿಕೃತ ಮರಳು ಸಾಗಾಟ ಸೇರಿದಂತೆ ಇತರೆ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವಲ್ಲಿ ಪೊಲೀಸ್ ರು ಮುಂದಾದರೆ ಅದಕ್ಕೆ ಸ್ಥಳೀಯ ರಾಜಕೀಯ ಪ್ರಭಾವಿಗಳ ಅಡ್ಡಿ ಇದೆ ಎಂದು ಹೇಳಲಾಗಿದೆ, ಇದರಿಂದ ಪೊಲೀಸ್ ರು ಸಹ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದೆ ಅಸಹಾಯಕ
ಆಗಿರುವರು. ಇಲ್ಲದಿದ್ದರೆ ಈ ರೀತಿಯ ಅನಧಿಕೃತ ಚಟುವಟಿಕೆಗಳು ನಡೆಯಲು ಸಾಧ್ಯವಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಕಾನೂನನ್ನು ಗೌರವಿಸುವದಕ್ಕಾದರು ಸಂಬಂಧಿಸಿದ ಅಧಿಕಾರಿಗಳು ಕ್ರಮಕ್ಕೆ ಮುಂದಾಗಲಿ
ಯಾವುದೇ ಅನಧಿಕೃತ ಸಾಗಾಟ, ಚಟುವಟಿಕೆಗಳು ಕಂಡು ಬಂದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು, : ಹುಲಗೇಶ ಓಂಕಾರ, ಪಿ.ಎಸ್.ಐ. ಯಲಬುರ್ಗಾ
ದಿನನಿತ್ಯ ಮರಳು ಸಾಗಾಟದ ಟ್ರ್ಯಾಕ್ಟರ್ ಗಳಿಂದ ನಮಗೆ ಕಿರಿಕಿರಿ ಉಂಟಾಗಿದೆ, ಇಲ್ಲಿಯ ರಸ್ತೆಗಳು ಹಾಳಾಗಿದ್ದು, ಟ್ರ್ಯಾಕ್ಟರ್ ಓಡಾಟದ ಬಗ್ಗೆ ಆಕ್ಷೇಪಿಸಿದರೆ ನಮಗೆ ಧಮಕಿ ಹಾಕಿ ಭಯ ಮೂಡಿಸುತ್ತಿದ್ದು, ಇಂತಹವರ ಮೇಲೆ ಕಾನೂನು ಕ್ರಮ ಜರುಗಿಸಬೇಕು : ಯಲಬುರ್ಗಾ ಪಟ್ಟಣದ ನಿವಾಸಿಗಳು.
Join The Telegram | Join The WhatsApp |