Join The Telegram | Join The WhatsApp |
ಕಲಬುರಗಿ : ಕಲಬುರಗಿ ವಲಯದಲ್ಲಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಎಸ್.ಸಿ.ಎಸ್.ಟಿ. ಮೀಸಲು ಹೆಚ್ಚಳ, ತಳಸಮುದಾಯ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಕಲಬುರಗಿ ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಗುರುವಾರ 74ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ನಂತರ ವಿವಿಧ 11 ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಾಂಗದ ದಶಕದ ಬೇಡಿಕೆಗೆ ಸ್ಪಂದಿಸಿರುವ ನಮ್ಮ ಸರ್ಕಾರ ಈ ವರ್ಗಕ್ಕೆ ಸಂವಿಧಾನಬದ್ಧವಾಗಿ ನೀಡಲಾಗಿರುವ ಮೀಸಲಾತಿ ಪ್ರಮಾಣ ಕ್ರಮವಾಗಿ ಶೇ.15 ರಿಂದ 17ಕ್ಕೆ ಮತ್ತು ಶೇ.3 ರಿಂದ 7ಕ್ಕೆ ಹೆಚ್ಚಿಸುವ ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳುವ ಮೂಲಕ ಶೋಷಿತ ವರ್ಗಕ್ಕೆ ನ್ಯಾಯ ಒದಗಿಸಲಾಗಿದೆ. ಪ್ರಸಕ್ತ 2022-23ನೇ ಆರ್ಥಿಕ ಸಾಲಿನಲ್ಲಿ 28,234 ಕೋಟಿ ರೂ. ಅನುದಾನ ಈ ವರ್ಗಕ್ಕೆ ಹಂಚಿಕೆ ಮಾಡಿದ್ದು, ತಳ ಸಮುದಾಯಗಳ ಶ್ರೇಯೋಭಿವೃದ್ಧಿಗೆ ಸರ್ಕಾರ ಶ್ರಮಿಸುತ್ತಿದೆ ಎಂದರು.
ಕಲಬುರಗಿ ಜಿಲ್ಲೆಯಲ್ಲಿ 2013-14 ರಿಂದ 2022-23ನೇ ಸಾಲಿನ ವರೆಗೆ ಕೆ.ಕೆ.ಆರ್.ಡಿ.ಬಿ ಮಂಡಳಿ ಅನುದಾನದಡಿ 8,797 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಇದರಲ್ಲಿ 7,259 ಕಾಮಗಾರಿ ಪೂರ್ಣಗೊಳಿಸಿದೆ. ಹಂಚಿಕೆಯಾದ 3,489.27 ಕೋಟಿ ರೂ. ಮೊತ್ತದಲ್ಲಿ 2,104.35 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಸಚಿವರು ತಮ್ಮ ಭಾಷಣದಲ್ಲಿ ತಿಳಿಸಿದರು.
Join The Telegram | Join The WhatsApp |