Join The Telegram | Join The WhatsApp |
ಕಲಬುರ್ಗಿ: ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ವಸತಿ ಶಾಲೆಯ ಪ್ರಾಚಾರ್ಯ ಹಾಗೂ ಕಂಪ್ಯೂಟರ್ ಆಪರೇಟರ್ ವಿರುದ್ಧ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಿಟ್ಟಿನಲ್ಲಿ ವಸತಿ ಶಾಲೆಯ ಸಿಬ್ಬಂದಿಯನ್ನು ಕೆಲವರು ಥಳಿಸಿದ ಘಟನೆ ಚಿಂಚೋಳಿ ತಾಲ್ಲೂಕಿನಲ್ಲಿ ನಡೆದಿದೆ. ವಿದ್ಯಾರ್ಥಿನಿಯರು ನೀಡಿರುವ ದೂರು ಆಧರಿಸಿ ಚಿಂಚೋಳಿ ತಾಲ್ಲೂಕು ಕುಂಚಾವರಂ ಠಾಣೆ ಪೊಲೀಸರು ಪ್ರಾಚಾರ್ಯ ಸೇರಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮೈ ಕೈ ಮುಟ್ಟುವುದು, ಮಲಗಿರುವಾಗ ಕಿಟಕಿಗಳಿಂದ ಇಣುಕಿ ನೋಡುವುದು, ಅಸಭ್ಯವಾಗಿ ವರ್ತಿಸುವುದು, ಅಶ್ಲೀಲವಾಗಿ ಮಾತನಾಡುವುದು ಸೇರಿದಂತೆ ಹಲವು ರೀತಿಯಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ವಿದ್ಯಾರ್ಥಿನಿಯರಿಂದ ಮಾಹಿತಿ ಪಡೆದ ಪೋಷಕರು ವಸತಿ ಶಾಲೆಗೆ ಬಂದು ಕೈಗೆ ಸಿಕ್ಕ ಕಂಪ್ಯೂಟರ್ ಆಪರೇಟರ್ನನ್ನು ಹಿಡಿದು ಥಳಿಸಿದರು. ಇಬ್ಬರ ವಿರುದ್ಧ ಕಠೀಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟಿಸಿದರು. ಸಮಾಜ ಕಲ್ಯಾಣ ಇಲಾಖೆಯು ಈ ವಸತಿ ಶಾಲೆಯನ್ನು ನಿರ್ವಹಿಸುತ್ತಿದ್ದು, ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ.
ವಿದ್ಯಾರ್ಥಿಗಳ ಆರೋಪದ ಬಗ್ಗೆ ಮಾಹಿತಿ ಪಡೆದ ಸಮಾಜ ಕಲ್ಯಾಣ ಇಲಾಖೆಯ ಚಿಂಚೋಳಿ ತಾಲ್ಲೂಕಿನ ಸಹಾಯಕ ನಿರ್ದೇಶಕ ಪ್ರಭುಲಿಂಗ ವಾಲಿ, ಶಾಲೆಯ ಪ್ರಾಚಾರ್ಯ ಮತ್ತು ಕಂಪ್ಯೂಟರ್ ಶಿಕ್ಷಕನ ವಿರುದ್ದ ಕುಂಚಾವರಂ ಠಾಣೆಗೆ ದೂರು ನೀಡಿದ್ದಾರೆ. ಇಬ್ಬರ ವಿರುದ್ಧವೂ ಪೊಕ್ಸೊ, ಅಟ್ರಾಸಿಟಿ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇಬ್ಬರನ್ನು ಕೂಡಾ ಕುಂಚಾವರಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಇನ್ನು ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರು ತಮಗೆ ಲೈಂಗಿಕ ಕಿರುಕುಳವಾಗುತ್ತಿದೆ ಅಂತ ಆರೋಪಿಸಿ ನಿನ್ನೆ ಸಂಜೆಯವರಗೆ ಊಟ ಮಾಡದೆ ಕುಳಿತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಚಿಂಚೋಳಿ ತಹಶಿಲ್ದಾರ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಕಲಬುರಗಿ ಎಸ್ಪಿ ಇಶಾ ಪಂತ್ ಸೇರಿದಂತೆ ಅನೇಕ ಅಧಿಕಾರಿಗಳು ಹಾಸ್ಟೆಲ್ಗೆ ಭೇಟಿ ನೀಡಿ ಪರಿಶೀಲಿಸಿದರು. ಮಕ್ಕಳಿಗೆ ಕೌನ್ಸಲಿಂಗ್ ಮಾಡಿ ಧೈರ್ಯ ಹೇಳಿದರು. ವಿದ್ಯಾರ್ಥಿಗಳಿಗೆ ಊಟ ಮಾಡುವಂತೆ ಮನವೊಲಿಸಿ, ತಾವೇ ಮುಂದೆ ನಿಂತು ಬಡಿಸಿದರು.
ವಸತಿ ಶಾಲೆಯ ಪ್ರಾಚಾರ್ಯ ಮತ್ತು ಕಂಪ್ಯೂಟರ್ ಶಿಕ್ಷಕನ ವಿರುದ್ದ ದೂರು ದಾಖಲಾಗಿದೆ. ಇಬ್ಬರನ್ನು ಕೂಡಾ ಬಂಧಿಸಲಾಗಿದೆ. ಕಾನೂನು ರೀತಿ ಇಬ್ಬರ ವಿರುದ್ದ ಕ್ರಮ ಕೈಗೊಳ್ಳಲಾಗುವು ಎಂದು ಎಸ್ಪಿ ಇಶಾ ಪಂತ್ ಹೇಳಿದರು
Join The Telegram | Join The WhatsApp |