Join The Telegram | Join The WhatsApp |
ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಚರ್ಮಗಂಟು ರೋಗದಿಂದ ಜಾನುವಾರುಗಳು ಮೃತಪಟ್ಟ ಪ್ರಕರಣದಲ್ಲಿ ಮಾಲೀಕರುಗಳಿಗೆ ಆಗುವ ಆರ್ಥಿಕ ನಷ್ಟ ತಪ್ಪಿಸಲು ಪರಿಹಾರ ನೀಡಲಾಗಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ತಿಳಿಸಿದರು.
ಬೆಳಗಾವಿ ತಾಲ್ಲೂಕಿನ ಖನಗಾವಿ ಬಿ.ಕೆ, ಖನಗಾವಿ ಕೆ.ಹೆಚ್ ಮತ್ತು ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮಗಳಲ್ಲಿ ಚರ್ಮಗಂಟು ರೋಗ ಪೀಡಿತ ಜಾನುವಾರುಗಳನ್ನು ಪರಿಶೀಲನೆ ನಡೆಸಿ ಮಾತನಾಡಿದರು.
ಜಿಲ್ಲೆಯಲ್ಲಿ 43000ಕ್ಕೂ ಮೇಲ್ಪಟ್ಟ ಜಾನುವಾರುಗಳು ಚರ್ಮಗಂಟು ರೋಗಪೀಡಿತವಾಗಿದ್ದು, ಉತ್ತಮ ಚಿಕಿತ್ಸೆಯಿಂದ 25000ಕ್ಕೂ ಹೆಚ್ಚು ಜಾನುವಾರು ಗುಣಮುಖ ಹೊಂದಿವೆ. ಇನ್ನೂಳಿದ ರಾಸುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೃತಪಟ್ಟ ಜಾನುವಾರುಗಳ ಮಾಲೀಕರುಗಳಿಗೆ ಪರಿಹಾರವನ್ನು ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ. ಚಿಕಿತ್ಸೆ ಮತ್ತು ಪರಿಹಾರ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದರು.
ರಾಜ್ಯದಲ್ಲಿ 2 ಲಕ್ಷಕ್ಕೂ ಅಧಿಕ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಪತ್ತೆಯಾಗಿದ್ದು, 1.75 ಲಕ್ಷಕ್ಕೂ ಮೇಲ್ಪಟ್ಟ ಜಾನುವಾರುಗಳಲ್ಲಿ ಚೇತರಿಕೆ ಕಂಡು ಬಂದಿದೆ. ರೈತರು ಆತಂಕಕ್ಕೆ ಒಳಗಾಗದೇ ಸರ್ಕಾರದೊಂದಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಅವರು ತಿಳಿಸಿದರು.
ಚರ್ಮಗಂಟು ರೋಗದಿಂದ ಉಂಟಾಗುವ ಜಾನುವಾರುಗಳ ಮರಣದಿಂದ ರೈತರ/ಜಾನುವಾರು ಮಾಲೀಕರಿಗೆ ನಷ್ಟವನ್ನು ಭರಿಸಲು ಭರಿಸಲಾಗುತ್ತಿದೆ. ಚರ್ಮಗಂಟು ರೋಗವನ್ನು ಹತೋಟಿ ತರಲಾಗುತ್ತಿದೆ. ರಾಜ್ಯಾದ್ಯಂತ 67 ಲಕ್ಷ ರಾಸುಗಳಿಗೆ ಲಸಿಕೆ ನೀಡಲಾಗಿದ್ದು, ಲಭ್ಯವಿರುವ 23 ಲಕ್ಷ ಡೋಸ್ ಲಸಿಕೆಯನ್ನು ಮುಂದಿನ ದಿನಗಳಲ್ಲಿ ನೀಡಲಾಗುತ್ತಿದೆ. ಜಾನುವಾರುಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ರೈತರಲ್ಲಿ ಈ ಕುರಿತು ಜಾಗೃತಿ ಮತ್ತು ಅರಿವು ಮೂಡಿಸಲಾಗುತ್ತಿದೆ ಎಂದು ಪ್ರಭು ಚವ್ಹಾಣ್ ಹೇಳಿದರು.
ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಂಡು ಬಂದ ತಕ್ಷಣ ಗೋಪ್ರೇಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶೇಷ ಆಸಕ್ತಿ ವಹಿಸಿ ತಕ್ಷಣವೇ ಪರಿಹಾರ ಧನ ವಿತರಣೆಗಾಗಿ ನಮ್ಮ ರಾಜ್ಯ ಸರ್ಕಾರ ರೂ.37 ಕೋಟಿ ಹಣ ನೀಡಿದೆ ಎಂದು ಪ್ರಭು ಚವ್ಹಾಣ್ ಅವರು ವಿವರಿಸಿದರು.
ರೈತರೊಂದಿಗೆ ಸಂವಾದ ನಡೆಸಿದ ಸಚಿವ ಪ್ರಭು ಚವ್ಹಾಣ್ ಅವರು, ಖನಗಾವಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಪಶುಸಂಗೋಪನೆ ಇಲಾಖೆಯಿಂದ ಕೈಗೊಂಡ ಔಷಧೋಪಚಾರ, ಚಿಕಿತ್ಸೆ ಮತ್ತು ಪರಿಹಾರ ಕಾರ್ಯಗಳ ಕುರಿತು ಮಾಹಿತಿ ಪಡೆದು, ಸರ್ಕಾರ ನಿಮ್ಮೊಂದಿಗಿದೆ ಎಂದು ಅಭಯ ನೀಡಿದರು.
ಶೀಘ್ರ ಸ್ಪಂದನೆಗೆ ತಾಕೀತು: ರೈತರಿಂದ ಜಾನುವಾರುಗಳ ಆರೋಗ್ಯ ಸಮಸ್ಯೆ ಕುರಿತು ಕರೆ ಬಂದ ತಕ್ಷಣ ಕೂಡಲೇ ಪಶು ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಪಶು ಸಂಜೀವಿನಿ ಆ್ಯಂಬುಲೆನ್ಸ್ ವಾಹನದಲ್ಲಿ ತೆರಳಿ ತುರ್ತು ಚಿಕಿತ್ಸೆ ನೀಡಬೇಕು. ಯಾವುದೇ ಕಾರಣಕ್ಕೂ ಪಶು ವೈದ್ಯಾಧಿಕಾರಿಗಳ ಮೊಬೈಲ್ ಸ್ವೀಚ್ಡ್ ಆಫ್ ಆಗದಂತೆ ತಾಕೀತು ಮಾಡಿದರು.
ಸ್ಥಳದಲ್ಲೇ ಪಶುಸಂಗೋಪನೆ ಇಲಾಖಾ ಅಧಿಕಾರಿಗಳು, ಪಶು ವೈದ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ಪ್ರಭು ಚವ್ಹಾಣ್ ಅವರು, ರೈತರ ಕರೆಗಳಿಗೆ ನಿರ್ಲಕ್ಷ್ಯ ಮಾಡದೇ ಕೂಡಲೇ ಸ್ಪಂದಿಸಬೇಕು. ಜಾನುವಾರುಗಳ ಆರೋಗ್ಯ ಸಮಸ್ಯೆಗೆ ಸ್ಪಂದಿಸದೇ ನಿರ್ಲಕ್ಷ್ಯ ಮಾಡುವ ಪಶುವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಯಾವುದೇ ಮುಲಾಜಿಲ್ಲದೇ ಅಮಾನತು ಮಾಡುತ್ತೇನೆ ಎಂದು ತರಾಟೆ ತೆಗೆದುಕೊಂಡರು.
ಶೀಘ್ರದಲ್ಲೇ ಗೋಶಾಲೆ ಲೋಕಾರ್ಪಣೆ: ಹುಕ್ಕೇರಿ ತಾಲ್ಲೂಕಿನ ಬೆಳವಿಯಲ್ಲಿರುವ ಬೆಳಗಾವಿ ಜಿಲ್ಲಾ ಸರ್ಕಾರಿ ಗೋಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ ನಂತರದಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ಬಾಕಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಡಿಸೆಂಬರ್ ಅಂತ್ಯದಲ್ಲಿ ಜಿಲ್ಲಾ ಸರ್ಕಾರಿ ಗೋಶಾಲೆ ಲೋಕಾರ್ಪಣೆಗೊಳಿಸೋಣ ಎಂದರು.
ಈ ಸಂದರ್ಭದಲ್ಲಿ ಇಲಾಖೆ ನಿರ್ದೇಶಕ ಡಾ.ಮಂಜುನಾಥ್ ಪಾಳೇಗಾರ್, ಬೆಳಗಾವಿ ಜಿಲ್ಲಾ ಉಪ ನಿರ್ದೇಶಕ ಡಾ.ರಾಜು ಕೂಲೇರೆ, ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಡಾ.ಪರಮೇಶ್ ನಾಯ್ಕ್ ಸೇರಿದಂತೆ ಗ್ರಾಮಸ್ಥರಿದ್ದರು..
ವರದಿ ಪ್ರಕಾಶ ಕುರಗುಂದ..
Join The Telegram | Join The WhatsApp |