Join The Telegram | Join The WhatsApp |
ಹುಬ್ಬಳ್ಳಿ : ತಾಲೂಕು ಆಡಳಿತಸೌಧದ ಮುಂಭಾಗದಲ್ಲಿ 74 ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ ಪ್ರಕಾಶ ನಾಶಿ ಅವರು ನೆರವೇರಿಸಿದರು.
ನಂತರ ಮಾತನಾಡಿದ ಅವರು, ಪ್ರತಿಯೊಬ್ಬ ಸರ್ಕಾರಿ ನೌಕರನು ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು.ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸಿ, ಸದೃಢ ಸಮಾಜ ನಿರ್ಮಾಣ ಮಾಡಬೇಕು. 18 ಕಂದಾಯ ಅದಾಲತ್ ಕಾರ್ಯಕ್ರಮ ಹಮ್ಮಿಕೊಂಡು ಹುಬ್ಬಳ್ಳಿ ಗ್ರಾಮೀಣ ತಾಲೂಕಿನಲ್ಲಿ ಪಹಣಿ ಪತ್ರಿಕೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಲಾಗಿದೆ. 760 ಅರ್ಜಿಗಳನ್ನು ಇತ್ಯರ್ಥಗೊಳಿಸಲಾಗಿರುತ್ತದೆ. ಅತಿವೃಷ್ಟಿಯಿಂದ ತಾಲೂಕಿನಲ್ಲಿ 460 ಮನೆಗಳು ಹಾನಿಗೀಡಾಗಿದ್ದು, ರೂ. 2.97 ಕೋಟಿ ಹಾಗೂ ಗೃಹ ಬಳಕೆ ವಸ್ತುಗಳ ಹಾನಿಗೆ 336 ಕುಟುಂಬಗಳಿಗೆ ತಲಾ ರೂ. 10 ಸಾವಿರದಂತೆ ರೂ. 33.60 ಲಕ್ಷ ಪರಿಹಾರ ಒದಗಿಸಲಾಗಿದೆ. 27,703 ರೈತರ ಕುಟುಂಬಗಳಿಗೆ ಬೆಳೆಹಾನಿ ಪರಿಹಾರ ನೀಡಲಾಗಿದೆ ಎಂದರು.
14 ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮಗಳ ಮೂಲಕ ವಿವಿಧ ಇಲಾಖೆಗಳ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ, ಅಂಗವಿಕಲ ವೇತನ, ವಿಧವಾ ವೇತನ, ಮನಸ್ವಿನಿ ಯೋಜನೆಗಳ 1796 ಮಾಸಿಕ ಪಿಂಚಣಿ ಮಂಜೂರು ಮಾಡಲಾಗಿರುತ್ತದೆ ಎಂದು ತಿಳಿಸಿದರು.
ಗ್ರಾಮ್ ಒನ್ ಫ್ರಾಂಚೈಸಿ ಇಂಗಳಹಳ್ಳಿ ಗ್ರಾಮದ ನಾರಾಯಣ ಹಂಚಾಟೆ ಅವರನ್ನು ಸನ್ಮಾನಿಸಲಾಯಿತು.
ಹುಬ್ಬಳ್ಳಿ ಶಹರ ತಹಸೀಲ್ದಾರ ಶಶಿಧರ್ ಮಾಡ್ಯಾಳ, ಅಪರ ತಹಸೀಲ್ದಾರ ಶಿವಾನಂದ ಹೆಬ್ಬಳ್ಳಿ, ತಾಲೂಕು ಪಂಚಾಯತ, ಪೊಲೀಸ್ ಇಲಾಖೆ, ಭೂ ದಾಖಲೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.
ಸುಧೀರ್ ಕುಲಕರ್ಣಿ
Join The Telegram | Join The WhatsApp |