ಬೆಂಗಳೂರು : ರಾಜ್ಯದ ಪ್ರಮುಖ ಆದಾಯದ ಮೂಲವಾಗಿರುವ ಅಬಕಾರಿ ಇಲಾಖೆಯ ಆದಾಯವನ್ನು ಇನ್ನೂ ಹೆಚ್ಚಿಗೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದ್ದು ಆ ಮೂಲಕ ಎಲ್ಲಾ ಜಿಲ್ಲೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಇರುವಂತಹ ಸೂಪರ್ ಮಾರ್ಕೆಟ್ ನಲ್ಲಿ ಮದ್ಯ ಮಾರಾಟದ ಬಗ್ಗೆ ಚರ್ಚೆ ಮಾಡಲಾಗಿದೆ ಎಂಬ ಸುಳಿವನ್ನು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಸೂಪರ್ ಮಾರ್ಕೆಟ್ ನಲ್ಲಿ ಮದ್ಯ ಮಾರಾಟದ ವಿಷಯದ ಕುರಿತಾಗಿ ಮಾತನಾಡಿದ ಅವರು, ಈ ವಿಷಯದ ಕುರಿತಾಗಿ ಈಗಾಗಲೇ ಚರ್ಚೆ ಮಾಡಿದ್ದೇವೆ ಹೊರತು ಯಾವುದೇ ತೀರ್ಮಾನವಾಗಿಲ್ಲ ಎಂದರು.
ಈ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುತ್ತದೆ. ಅಲ್ಲದೆ ಸೂಪರ್ ಮಾರ್ಕೆಟ್ ನಲ್ಲಿ ಮಧ್ಯ ಮಾರಾಟದ ಸಾಧಕ ಬಾದಕ ಗಳೇನು ಎಂಬುದರ ಕುರಿತು ಚರ್ಚೆಯಾಗಿದೆ. ಮತ್ತೊಮ್ಮೆ ಇದರ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಇನ್ನೊಂದೆಡೆ ಗ್ರಾಮೀಣ ಪ್ರದೇಶಗಳಲ್ಲಿ ಕಿರಾಣಿ ಅಂಗಡಿ ಹಾಗೂ ಚಿಕ್ಕಪುಟ್ಟ ಅಂಗಡಿಗಳಲ್ಲಿ ಪರವಾನಿಗೆ ಇಲ್ಲದೆ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪ ಕೇಳಿ ಬಂದಿದೆ.
ಈಗಲೂ ಹಳ್ಳಿಗಳಲ್ಲಿ ಪರವಾನಗಿ ಇಲ್ಲದೆಯೇ ಮದ್ಯ ಮಾರಾಟ ಮಾಡುವವರ ಹಾವಳಿ ಹೆಚ್ಚಾಗುತ್ತಿದೆ. ಹೀಗಾಗಿ, ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟಬೇಕಿದೆ ಎಂದರು.
ಆದರೆ, ಮುಖ್ಯವಾಗಿ ಜನರು ಖರೀದಿ ಮಾಡುವ ಮದ್ಯವು ಕಾನೂನಾತ್ಮಕವಾಗಿರಲಿ ಎಂದು ನೋಡುತ್ತಿದ್ದೇವೆ. ಇನ್ನು ಸಿಕ್ಕಾಪಟ್ಟೆ ಮದ್ಯ ಮಾರಾಟ ಮಾಡುವ ಉದ್ದೇಶ ಇಲ್ಲ. ಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಬಕಾರಿ ಇಲಾಖೆಗೆ ಯಾವುದೇ ತೆರಿಗೆ ಸಂಗ್ರಹ ಟಾರ್ಗೆಟ್ ನೀಡಿಲ್ಲ ಎಂದು ತಿಳಿಸಿದರು.