Join The Telegram | Join The WhatsApp |
ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಮಧ್ಯೆ ನಿಪ್ಪಾಣಿ ನಗರಸಭೆ ಕಟ್ಟಡ ಮೇಲಿನ ಎಂಇಎಸ್ ಭಗವಾ ಧ್ವಜತೆರವಿಗೆ ಆಗ್ರಹ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ನಗರಸಭೆ ಮೇಲೆ ಕಾನೂನು ಬಾಹಿರವಾಗಿ ಹಾರಾಡುತ್ತಿರುವ ಎಂಇಎಸ್ ಭಗವಾ ಧ್ವಜ ತೆರವುಗೊಳಿಸಬೇಕು ಎಂದು ಬೆಳಗಾವಿ ಜಿಲ್ಲಾಧಿಕಾರಿ, ಎಸ್‌ಪಿಗೆ ಉತ್ತರ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ, ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಮನವಿ ಸಲ್ಲಿಸಿದ್ದಾರೆ.
ನಿಪ್ಪಾಣಿ ನಗರಸಭೆ ಕಟ್ಟಡದ ಮೇಲೆ 31 ವರ್ಷಗಳಿಂದ ನಾಡದ್ರೋಹಿ ಎಂಇಎಸ್ ಧ್ವಜ ಹಾರಾಡುತ್ತಿದೆ. ಕಳೆದ ವರ್ಷ ಡಿಸೆಂಬರ್ 22ರಂದು ಸಿಎಂ, ಪೌರಾಡಳಿತ ಸಚಿವರಿಗೆ ಪತ್ರ ಬರೆದಿದ್ದೆ. ದೂರು ನೀಡಿ ಒಂದು ವರ್ಷವಾದರೂ ಯಾವುದೇ ಕ್ರಮ ಕೈಗೊಳಂಡಿಲ್ಲ. ಈ ಸರ್ಕಾರ ಕನ್ನಡಪರ ಇದೆಯೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ. ಕಚೇರಿಗಳ ಮೇಲೆ ರಾಷ್ಟ್ರೀಯ ಬಾವುಟ ಹಾಗೂ ಸರ್ಕಾರದಿಂದ ಅನುಮೋದಿತವಾಗಿರುವ ಬಾವುಟ ಮಾತ್ರ ಹಾರಿಸಬೇಕು. ಆದರೆ ಈ ನಿಯಮಗಳು ನಿಪ್ಪಾಣಿ ನಗರಸಭೆಗೆ ಅನ್ವಯಿಸುವುದಿಲ್ಲವೇ ಎಂದು ಅಸಮಾಧಾನ ಹೊರಹಾಕಿದ್ದಾರೆ.
1964ರ ಕರ್ನಾಟಕ ಪೌರಸಭೆಗಳ ಅಧಿನಿಯಮ ಸೆಕ್ಷನ್ 372ಎ ನಲ್ಲಿ ಈ ಬಗ್ಗೆ ವಿವರಿಸಲಾಗಿದೆ. ಈ ನಿಯಮ ಉಲ್ಲಂಘಿಸಿದ ವ್ಯಕ್ತಿಗೆ 3 ತಿಂಗಳ ಜೈಲು ಶಿಕ್ಷೆ ಇದೆ. ಪ್ರತಿ ದಿನಕ್ಕೆ 500 ರೂ. ದಂಡ ವಿಧಿಸುವ ಬಗ್ಗೆ ಉಲ್ಲೇಖವಿದೆ. ಈ ಬಗ್ಗೆ ನಿಪ್ಪಾಣಿ ಶಾಸಕಿ, ಸಚಿವೆ ಶಶಿಕಲಾ ಜೊಲ್ಲೆ ಸಹ ಮೌನವಹಿಸಿದ್ದಾರೆ. ನಿಪ್ಪಾಣಿ ನಗರಸಭೆ ಕಟ್ಟಡ ಮೇಲಿನ ಭಗವಾ ಧ್ವಜ ಕೂಡಲೇ ತೆರವುಗೊಳಿಸಿಸಬೇಕು. ಇಲ್ಲವಾದರೆ ಬೆಳಗಾವಿ ಅಧಿವೇಶನ ವೇಳೆ ನಾವೇ ಎಂಇಎಸ್ ಭಗವಾ ಧ್ವಜ ಕಿತ್ತು ಕನ್ನಡ ಬಾವುಟ ಹಾರಿಸುತ್ತೇವೆ. ಇದರಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಜಿಲ್ಲಾಡಳಿತ, ರಾಜ್ಯ ಸರ್ಕಾರವೇ ಹೊಣೆ ಎಂದು ಎಚ್ಚರಿಕೆ ನೀಡಿದರು.
ಕಳೆದ ವರ್ಷ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಎಂಟಿಬಿ ನಾಗರಾಜ್‌ಗೆ ಭೀಮಪ್ಪ ಗಡಾದ್ ಮನವಿ ಸಲ್ಲಿಸಿದ್ದರು. ಮನವಿ ಸಲ್ಲಿಸಿ ಒಂದು ವರ್ಷವಾದರೂ ಕ್ರಮ ಕೈಗೊಳ್ಳದಿದ್ದಕ್ಕೆ ಆಕ್ರೋಶ ಹೊರಹಾಕಿದ್ದಾರೆ.
ಭಗವಾ ಧ್ವಜ ಹಾರಿಸಲು ನಗರಸಭೆಯೇ ಹೊರಡಿಸಿತ್ತು ಠರಾವು!
ನಿಪ್ಪಾಣಿ ನಗರಸಭೆ ಮೇಲೆ ಭಗವಾ ಧ್ವಜ ಹಾರಿಸಲು 1990 ರ ಮೇ 29ರಂದು ನಗರಸಭೆಯೇ ಠರಾವು ಪಾಸ್ ಮಾಡಿತ್ತು. ಹೀಗಾಗಿ ಕಳೆದ 31 ವರ್ಷಗಳಿಂದ ನಿಪ್ಪಾಣಿ ನಗರಸಭೆ ಮೇಲೆ ಭಗವಾ ಧ್ಚಜ ಹಾರಾಡುತ್ತಿದೆ ಎಂದು ಹೇಳಲಾಗುತ್ತಿದೆ. ನಿಪ್ಪಾಣಿ ನಗರಸಭೆ ಕಟ್ಟಡ ಮೇಲೆ ಭಗವಾ ಧ್ವಜ ಹಾರಿಸಬೇಕು. ಇದು ನಿಪ್ಪಾಣಿಯ ಬಹುತೇಕ ಮರಾಠಿ ಭಾಷಿಕರ ಆಸೆಯಾಗಿದೆ. ನಿಪ್ಪಾಣಿ ಮರಾಠಿ ಭಾಷಿಕರು ಮಹಾರಾಷ್ಟ್ರ ಸೇರಲು ಕಷ್ಟಪಡುತ್ತಿದ್ದಾರೆ. ಗಡಿವಿವಾದ ಬಗೆಹರಿಸುವ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ. ನಿಪ್ಪಾಣಿ ನಗರಸಭೆ ಕಟ್ಟಡ ಮೇಲೆ ಭಗವಾ ಧ್ವಜ ಹಾರಿಸಿದ ಬಳಿಕವೇ ನಾವು ಅಧಿಕಾರ ಸ್ವೀಕರಿಸುತ್ತೇವೆ. ಎಲ್ಲರ ಒಪ್ಪಿಗೆ ಮೇರೆಗೆ ನಿಪ್ಪಾಣಿ ನಗರಸಭೆ ಕಟ್ಟಡ ಮೇಲೆ ಭಗವಾ ಧ್ವಜ ಹಾರಿಸಲಾಗುವುದು. ನಗರಸಭೆ ಆಯುಕ್ತರು ಭಗವಾ ಧ್ವಜದ ರಕ್ಷಣೆ ಮಾಡಬೇಕೆಂದು ನಗರ ಸಭೆಯಲ್ಲಿ ಠರಾವು ಹೊರಡಿಸಲಾಗಿತ್ತು.
Join The Telegram | Join The WhatsApp |