Join The Telegram | Join The WhatsApp |
ಪರಿಶಿಷ್ಟ ಜಾತಿ ಹಾಗೂ ಪಂಗಡದ ಇಲಾಖಾವಾರು ಅನುದಾನ ಪ್ರಗತಿ ಪರಿಶೀಲನಾ ಸಭೆ
ಬೆಳಗಾವಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಅಭಿವೃದ್ಧಿಗಾಗಿ ಪ್ರತಿ ಇಲಾಖಾವಾರು ವಿವಿಧ ಯೋಜನೆಗಳಡಿ ಬಿಡುಗಡೆಯಾಗುವ ಅನುದಾನವನ್ನು ಶೇ 100 ರಷ್ಟು ಸಮಪರ್ಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಯೋಜನೆಗಳ ಸೂಕ್ತ ಮಾಹಿತಿ, ಸದ್ಬಳಕೆ ಸಂಬಧವಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲೂಕಾ ಮಟ್ಟದ ಅಧಿಕಾರಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿರಬೇಕು ಎಂದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಪ್ರಸಕ್ತ ವರ್ಷದ ಆಗಸ್ಟ್ ಅಂತ್ಯದವರೆಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಉಪಯೋಜನೆಗಳ ಅಡಿಯಲ್ಲಿ ಇಲಾಖಾವಾರು ಲಭ್ಯವಿರುವ ಅನುದಾನದಲ್ಲಿ ಕೈಗೊಂಡ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅನುದಾನ ಸದ್ಬಳಕೆಗೆ ಸೂಚನೆ:
ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆಗೆ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರು ಚರ್ಚಿಸಿ ಮಾಹಿತಿ ಕಲೆ ಹಾಕಿದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕಲ್ಯಾಣಕ್ಕಾಗಿ ಇಲಾಖಾವಾರು ಬಿಡುಗಡೆಯಾಗಿರುವ ಅನುದಾನ ಶೇ.100 ರಷ್ಟು ಸದ್ಬಳಕೆಯಾಗಬೇಕು. ಯಾವ ಯಾವ ಇಲಾಖೆಗಳಿಗೆೆ ಎಸ್‌ಸಿಪಿ, ಟಿಎಸ್‌ಪಿ ಕಾರ್ಯಕ್ರಮಗಳಡಿಯಲ್ಲಿ ಅನುದಾನ ಬಿಡುಗಡೆಯಾಗಿಲ್ಲ ಅನ್ನುವ ಕುರಿತಾಗಿ ವರದಿ ನೀಡಿದರೆ ಅನುದಾನ ಮಂಜೂರಿಗೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ವಸ್ತುಸ್ಥಿತಿ ಅರಿತು ಕಾರ್ಯ ನಿರ್ವಹಣೆ:
ಬರೀ ಕಾಟಾಚಾರಕ್ಕಾಗಿ ಅಂಕಿ ಅಂಶಗಳನ್ನು ಸಭೆಗೆ ಒಪ್ಪಿಸುವುದಕ್ಕಿಂತ ಆಯಾ ಇಲಾಖಾವಾರು ಅಧಿಕಾರಿಗಳು ನಿರ್ದಿಷ್ಟ ವಸ್ತು ಸ್ಥಿತಿ ಅರಿತುಕೊಂಡು ಎಸ್‌ಸಿಪಿ, ಟಿಎಸ್‌ಪಿ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ತೊಡಗಬೇಕು. ಬಿಡುಗಡೆಯಾಗಿರುವ ಅನುದಾನವನ್ನು ಅವೈಜ್ಞಾನಿಕವಾಗಿ ಹಾಗೂ ದುರುಪಯೋಗಪಡಿಸಿಕೊಳ್ಳುವುದು ಹೇಗೆ ಅಪರಾಧವೋ ಹಾಗೇ ಅನುದಾನ ಸಮಪರ್ಕ ಬಳಕೆಯಾಗದಿರುವುದು ಅಪರಾಧವೇ. ಹೀಗಾಗಿ ಜಿಲ್ಲಾ ಮತ್ತು ತಾಲೂಕಾ ಮಟ್ಟದ ಅಧಿಕಾರಿಗಳು ಅನುದಾನ ಬಳಕೆಯಲ್ಲಿ ಮುತುವರ್ಜಿವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರು ಅಧಿಕಾರಿಗಳಿಗೆ ತಿಳಿಸಿದರು.
ಶೇ.100 ರಷ್ಟು ಸಾಧಸಿದ ಇಲಾಖೆಗೆ ಮೆಚ್ಚುಗೆ:
ಪಶುಸಂಗೋಪನೆ ಇಲಾಖೆ, ಸಹಕಾರ ಇಲಾಖೆ, ವಾರ್ತಾ ಇಲಾಖೆ ಸೇರಿದಂತೆ ಇತರ ಕೆಲವು ಇಲಾಖೆಗಳು ಎಸ್‌ಸಿಪಿ, ಟಿಎಸ್‌ಪಿ ಕಾರ್ಯಕ್ರಮಗಳಡಿಯಲ್ಲಿ ಒದಗಿದ ಅನುದಾನವನ್ನು ಸದ್ಬಳಕೆ ಮಾಡಿಕೊಂಡಿವೆ. ಈ ಮೂಲಕ ನಿಗದಿತ ಗುರಿ ತಲುಪಿದ್ದು ಶೇ. 100 ಸಾಧನೆ ಕೈಗೊಂಡಿವೆ. ಹೀಗಾಗಿ ಶೇ.100 ರಷ್ಟು ಕಾರ್ಯಪ್ರಗತಿ ಸಾಧಿಸಿದ ಇಲಾಖೆಯ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಎಸ್‌ಸಿಪಿ, ಟಿಎಸ್‌ಪಿ ವರದಿ ಸಲ್ಲಿಕೆ:
ವಿವಿಧ ಇಲಾಖೆ, ಮಂಡಳಿ, ನಿಗಮಗಳ ಮೂಲಕ ಎಸ್‌ಸಿಪಿ, ಟಿಎಸ್‌ಪಿ ಕಾರ್ಯಕ್ರಮಗಳ ಪ್ರತಿಶತ ಅನುಷ್ಠಾನದ ಕುರಿತಾಗಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಉಮಾ ಸಾಲಿಗೌಡರ ಅವರು ಸಭೆಯಲ್ಲಿ ವಿವರಿಸಿದರು. ವಿವಿಧ ಇಲಾಖೆ, ಮಂಡಳಿ, ನಿಗಮಗಳಲ್ಲಿ ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ಬಿಡುಗಡೆಯಾಗಿರುವ ಅನುದಾನ, ಖರ್ಚುವೆಚ್ಚದ ಬಗ್ಗೆ ಅಧಿಕಾರಿ ಉಮಾ ಸಾಲಿಗೌಡರ ವಾಚನದೊಂದಿಗೆ ಸಭೆಗೆ ವರದಿ ಒಪ್ಪಿಸಿದರು..
ಸಭೆಯಲ್ಲಿ ನಾಮನಿರ್ದೇಶಿತ ಸದಸ್ಯರಾದ ಅಣ್ಣಾಸಾಹೇಬ ಹಂಚಿನಮನಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಉಮಾ ಸಾಲಿಗೌಡರ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಿವನಗೌಡ ಪಾಟೀಲ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಾಹನಿಂಗ ನಂದಗಾವಿ, ಎಸಿಪಿ ಚಂದ್ರಪ್ಪ ಕಟ್ಟಿಮನಿ, ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ಪ್ರಕಾಶ ಕುರಗುಂದ
Join The Telegram | Join The WhatsApp |