Opಬೆಳಗಾವಿ: ನಾನು ಈ ಜಾತಿ ವ್ಯವಸ್ಥೆಗೆ ಯಾವತ್ತಿದ್ದರೂ ವಿರುದ್ಧ. ಆದರೆ ಅಶಕ್ತ ಜನ ಸಮುದಾಯಗಳು ತಮ್ಮ ಸಂವಿಧಾನಬದ್ದ ಹಕ್ಕುಗಳನ್ನು ಪಡೆದುಕೊಳ್ಳಲು ಸಂಘಟಿತರಾಗುವುದು ತಪ್ಪಲ್ಲ ಎಂದು ನಂಬಿದ್ದೇನೆ.
ಅಶಕ್ತ ಸಮುದಾಯಗಳು ಸಂಘಟಿತರಾಗದೇ ಇರುವುದರಿಂದ ಮತ್ತು ತಮ್ಮಲ್ಲಿ ನಾಯಕತ್ವ ಬೆಳೆಸಿಕೊಳ್ಳದೇ ಇರುವುದರಿಂದ ಅವರ ಪಾಲಿನ ಹಕ್ಕುಗಳು ಮತ್ತು ರಾಜಕೀಯ ಅಧಿಕಾರದಿಂದ ವಂಚಿತವಾಗಿವೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.
ನೆಹರೂ ನಗರದ ಜಿಲ್ಲಾ ಕ್ರೀಡಾ ಮೈದಾನದಲ್ಲಿ ನಡೆದ ಶೆಫರ್ಡ್ ಇಂಡಿಯಾ ಇಂಟರ್ ನ್ಯಾಷನಲ್ ನ 9ನೇ ರಾಷ್ಟ್ರೀಯ ಸಮಾವೇಷದಲ್ಲಿ ಮಾತನಾಡಿದ ಅವರು, ಸಮಾಜದ ಎಲ್ಲಾ ಜಾತಿ-ವರ್ಗದ ಜನಗಳು ಸಂಘಟಿತರಾಗಿ ಸಂವಿಧಾನಬದ್ದ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದು ನುಡಿದರು.
ನಾನು ಯಾವತ್ತೂ ಜಾತಿ ಮಾಡುವವನಲ್ಲ. ಸಾಮಾಜಿಕ ನ್ಯಾಯ ನನ್ನ ಉಸಿರು. ಅವಕಾಶ ವಂಚಿತ ಜಾತಿಗಳ ಜನ ತಮ್ಮ ಸಂವಿಧಾನಬದ್ದ ಹಕ್ಕುಗಳನ್ನು ಪಡೆದುಕೊಳ್ಳಲು ಸಂಘಟಿತ ಸಮಾವೇಶ ನಡೆಸುವುದು ತಪ್ಪಲ್ಲ ಎಂದು ಸಮಾಜವಾದಿ ನಾಯಕ ರಾಮಮನೋಹರ ಲೋಹಿಯಾ ಹೇಳಿದ್ದರು. ಅದರಂತೆ ಈ ಸಮಾವೇಷ ನಡೆಯುತ್ತಿದೆ ಎಂದು ಮುಖ್ಯಮಂತ್ರಿಗಳು ಟೀಕಾಕಾರರಿಗೆ ಉತ್ತರ ನೀಡಿದರು.
ನಮ್ಮ ಸಮುದಾಯಕ್ಕೆ ರಾಜಕೀಯ ಇತಿಹಾಸ ಇದೆ. ಸಂಸ್ಕೃತಿಕ ಭವ್ಯತೆ ಇದೆ. ಹಕ್ಕ ಬುಕ್ಕರಿಂದ ಹಿಡಿದು ಅಹಲ್ಯಾಬಾಯಿ ಹೋಳ್ಕರ್ ವರೆಗೂ ನಮಗೊಂದು ಚರಿತ್ರೆ ಇದೆ. ಆದರೆ ಸಂಘಟನೆ ಇಲ್ಲದಿದ್ದರಿಂದ ನಮಗೆ ಸಲ್ಲಬೇಕಾಗಿದ್ದು ಸಲ್ಲುತ್ತಿರಲಿಲ್ಲ.
ಸಂಘಟನೆ ಇಲ್ಲದಿದ್ದರೆ ಕಾಗಿನೆಲೆ ಗುರುಪೀಠ, ಸಂಸ್ಥಾನ ಆಗುತ್ತಿರಲಿಲ್ಲ. ಕಾಗಿನೆಲೆ ಪೀಠ ಒಂದು ಜಾತಿಯ ಮಠ ಅಲ್ಲ. ಎಲ್ಲಾ ಶೋಷಿತ ಸಮುದಾಯಗಳಿಗೆ ಸೇರಿದ್ದು ಕಾಗಿನೆಲೆ ಪೀಠ ಎಂದರು.
ಪ್ರತಿ ಸಮುದಾಯಗಳು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಬೆಳೆದರೆ ಮಾತ್ರ ಸಮಸಮಾಜದ ನಿರ್ಮಾಣ ಸಾಧ್ಯ. ಎಲ್ಲರಿಗೂ ಅವರವರ ಪಾಲಿನ ಅಧಿಕಾರ , ಅವಕಾಶ ಸಿಗಬೇಕು. ಈ ಸಾಮಾನ್ಯ ಜ್ಞಾನ ನಮ್ಮನ್ನು ಟೀಕಿಸುವವರಿಗೆ ಇಲ್ಲವಾಗಿದೆ ಎಂದರು.
ನಮ್ಮದು ಹೇಳಿ ಕೇಳಿ ಜಾತಿ ಮತ್ತು ತಾರತಮ್ಯದಿಂದ ಕೂಡಿರುವ ಸಮಾಜ. ಹೀಗಾಗಿ ಅವಕಾಶಗಳ ಹಂಚಿಕೆಯಲ್ಲೂ ತಾರತಮ್ಯ ಇರುತ್ತದೆ. ಇವನ್ನೆಲ್ಲಾ ಸರಿದೂಗಿಸಬೇಕಾದರೆ ಸಂಘಟನೆ, ಸಮಾವೇಶಗಳು ಅಗತ್ಯ ಎಂದರು.
ನಾನು ರೂಪಿಸಿದ ಐದು ಗ್ಯಾರಂಟಿ ಯೋಜನೆಗಳು ಒಂದು ಸಮಾಜಕ್ಕೆ, ಒಂದು ಧರ್ಮಕ್ಕೆ, ಒಂದು ಜಾತಿಗೆ ಸೀಮಿತವಾದವುಗಳಲ್ಲ. ಸರ್ವ ಜಾತಿ ಜನಗಳ ಬದುಕಿಗೆ ಅನುಕೂಲ ಕಲ್ಪಿಸುತ್ತಿವೆ ಎಂದು ಮುಖ್ಯಮಂತ್ರಿಗಳು ಉದಾಹರಿಸಿದರು.