ಬೆಂಗಳೂರು : ಇತ್ತೀಚಿಗೆ ಕೇಂದ್ರ ಸರ್ಕಾರ ಜಾರಿ ಮಾಡಿರುವಂತಹ ಮಹಿಳಾ ಮೀಸಲಾತಿ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ಇದು ಮಹಿಳೆಯರಿಗೆ ಬಿಜೆಪಿ ಸರ್ಕಾರ ಮಾಡಿರುವಂತಹ ಪರಮ ವಂಚನೆಯಾಗಿದೆ ಎಂದು ತಿಳಿಸಿದರು.
ಡಾ.ರಾಮ ಮನೋಹರ ಲೋಹಿಯಾ ಸಮತಾ ವಿದ್ಯಾಲಯ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮತ್ತು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಇಂದು ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ “ಮಹಿಳಾ ಮೀಸಲಾತಿ” ವಿಚಾರ ಸಂಕಿರಣ ಉದ್ಘಾಟಿಸಿದ ಸಿಎಂ ಈ ರೀತಿ ಹೇಳಿದರು.
ಮಹಿಳಾ ಮೀಸಲಾತಿ ಬಿಲ್ ಸಿದ್ಧ ಪಡಿಸಿದ್ದು ಕಾಂಗ್ರೆಸ್. ಕಾಂಗ್ರೆಸ್ ಯಾವತ್ತೂ ಮಹಿಳಾ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ಇದೆ.
ಮಹಿಳಾ ಮೀಸಲಾತಿಯಲ್ಲೂ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಮೀಸಲಾತಿ ಇರಬೇಕು ಎನ್ನುವುದಕ್ಕೆ ನನ್ನ ಪೂರ್ಣ ಬೆಂಬಲ ಇದೆ. ಅದರಲ್ಲೂ ಶೇ. 33 ಮಾತ್ರವಲ್ಲ, ಶೇ. 50 ಮೀಸಲಾತಿಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದರು.
ಪ್ರಧಾನಿ ಜಾರಿ ಮಾಡಿರುವ ಮಹಿಳಾ ಮೀಸಲಾತಿಗೆ ಕೇಂದ್ರ ಸರ್ಕಾರ 15 ವರ್ಷ ಆಯಸ್ಸು ಫಿಕ್ಸ್ ಮಾಡಿದೆ. ಕಾಯ್ದೆ ಜಾರಿಯಾದ ದಿನದಿಂದ 15 ವರ್ಷ ಆಯಸ್ಸು ಇದೆ. ಅಂದರೆ ಈಗ ಕಾಯ್ದೆ ಜಾರಿ ಆಗಿದೆ. ಇದಕ್ಕೆ ಇನ್ನು 15 ವರ್ಷ ಮಾತ್ರ ಆಯಸ್ಸು. ಆದರೆ, ಜಾತಿ ಜನಗಣತಿ ಮತ್ತು ಡಿ-ಲಿಮಿಟೇಷನ್ ಎನ್ನುವ ಎರಡು ಕೊಕ್ಕೆ ಹಾಕಿದ್ದಾರೆ.
ಇವರೆಡೂ ಮುಗಿಯುವ ವೇಳೆಗೆ 15 ವರ್ಷ ಆಗಿರತ್ತೆ. ಹೀಗಾಗಿ ಮಹಿಳಾ ಮೀಸಲಾತಿ ಕಾಯ್ದೆ ಜಾರಿ ಆಗುವ ಮೊದಲೇ ಅದರ ಆಯಸ್ಸೇ ಮುಗಿದು ಹೋಗಿರುತ್ತದೆ. ಇದು ಮಹಿಳೆಯರಿಗೆ ಮಾಡಿರುವ ಪರಮ ವಂಚನೆ ಎಂದು ಅವರು ಹೇಳಿದರು.
ಈಗ ಮೋದಿಯವರು ಜಾರಿ ಮಾಡಿದ್ದೇನೆ ಎನ್ನುತ್ತಿರುವ ಈ ಮಹಿಳಾ ಮೀಸಲಾತಿ 2024ರಲ್ಲೂ ಜಾರಿ ಆಗುವುದಿಲ್ಲ. 2029ರಲ್ಲೂ ಜಾರಿ ಆಗುವುದಿಲ್ಲ, 2034ರಲ್ಲೂ ಜಾರಿ ಆಗುವುದಿಲ್ಲ. ಅಷ್ಟೊತ್ತಿಗೆ ಕಾಯ್ದೆಯ ಆಯಸ್ಸೇ ಮುಗಿದಿರುತ್ತದೆ.
ಮಹಿಳಾ ಮೀಸಲಾತಿ ಜಾರಿ ಆಗಿಬಿಟ್ಟಿತು ಎಂದು ಸುಳ್ಳು ನಂಬಿಕೊಂಡು ಸುಳ್ಳು ಚಪ್ಪಾಳೆ ಹೊಡಿಬೇಡಿ. ಮಹಿಳಾ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಾವು, ನೀವೆಲ್ಲಾ ಹೋರಾಟ ಮುಂದುವರಿಸಬೇಕು ಎಂದು ಸಿಎಂ ಹೇಳಿದರು.