ಬೆಂಗಳೂರು: ಸುಪ್ರೀಂ ಕೋರ್ಟ್ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸೋದಕ್ಕೆ ಆದೇಶದ ಬೆನ್ನಲ್ಲೇ ಕಾವೇರಿ ಕಿಚ್ಚು ತೀವ್ರಗೊಂಡಿದೆ. ಈ ಬೆನ್ನಲ್ಲೇ ಕಾವೇರಿ ನದಿ ನೀರು ವಿಚಾರವಾಗಿ ತಮಿಳುನಾಡಿಗೆ ನೀರು ಹರಿಸದಂತೆ ಶೀಘ್ರವೇ ಕರ್ನಾಟಕ ಬಂದ್ ಮಾಡೋದಾಗಿ ಕನ್ನಡಪರ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಇಂದು ವಿಧಾನಸೌಧದ ಬಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಹೊಸೂರು ಮೂಲಕ ಬೆಂಗಳೂರಿನಲ್ಲಿ ತಮಿಳರನ್ನು ಕರೆಸಿಕೊಳ್ಳಿ. ತಮಿಳು ಚಿತ್ರ ಬಂದ್ ಮಾಡುತ್ತೇವೆ. ಸೂಪರ್ ಸ್ಟಾರ್ ರಜನಿಕಾಂತ್ ಬೆಂಗಳೂರಿಗೆ ಬರಬಾರದು ಅಂತ ಹೇಳಿದರು.
ಕಾವೇರಿ ವಿಚಾರದಲ್ಲಿ ನಟ ರಜನಿಕಾಂತ್ ಅವರು ಏನು ನಿರ್ಧಾರ ಮಾಡ್ತಾರೆ ನೋಡಬೇಕು. ರಜನಿಕಾಂತ್ ಕರ್ನಾಟಕದ ಪರವೋ, ತಮಿಳುನಾಡು ಪರವೋ ಅಂತ ಕೇಳಿದರು.
ಕರ್ನಾಟಕ ದಿಕ್ಕಿಲ್ಲದಂತೆ ಆಗಿದೆ. ಸಿಎಂ ಏನು ನಿರ್ಧಾರ ಮಾಡ್ತಾರೆ ಅಂತ ನೋಡಬೇಕು. ರಾಜ್ಯದ ಎಲ್ಲಾ ಸಂಸದರು ರಾಜೀನಾಮೆ ಕೊಟ್ಟು ನಿಮ್ಮ ನಿಮ್ಮ ಧೈರ್ಯ ತೋರಿಸಿ ಅಂತ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದರು.
ಇನ್ನೆರಡು ದಿನಗಳಲ್ಲಿ ಕನ್ನಡಪರ ಸಂಘಟನೆಗಳು ಚರ್ಚೆ ಮಾಡುತ್ತೇವೆ. ಕನ್ನಡ ಸಂಘಟನೆಗಳ ಜೊತೆಗೆ ಚರ್ಚೆ ಮಾಡಿ ಹೋರಾಟಕ್ಕೆ ನಿರ್ಧಾರ ಮಾಡುತ್ತೇವೆ. ಕಾವೇರಿ ನೀರು ಬಿಡಲೇ ಬೇಕೆಂದ್ರೇ ಕರ್ನಾಟಕ ಬಂದ್ ಮಾಡಲು ಸಿದ್ಧ ಅಂತ ಹೇಳಿದರು.
ನಟರು ಬರುತ್ತೇವೆಂದು ಹೇಳಿದ್ದಾರೆ. ನೋಡೋಣ ಯಾವ ರೀತಿ ಸಪೋರ್ಟ್ ಮಾಡ್ತಾರೆ ಅಂತ. ನಮ್ಮ ಕನ್ನಡ ನಟರು ಎಲ್ಲೆಲ್ಲೋ ಇದ್ದಾರೆ. ಎಲ್ಲರೂ ಇಳಿಯಬೇಕು. ನಾಡಿನ ಪರ, ಜಲ, ಭಾಷೆ ವಿಚಾರದಲ್ಲಿ ಪ್ರತಿಭಟನೆಗೆ ಇಳಿಯಬೇಕು. ಬರದಿದ್ದರೇ ಏನು ಮಾಡಬೇಕೋ ಮಾಡೋಣ ಅಂದರು.
ಶಾಸಕರು ಮುದ್ದುಮುದ್ದಾಗಿ ಮಾತನಾಡಲು ವಿಧಾನಸೌಧಕ್ಕೆ ಬರುತ್ತಾರೆ. ಅವರೆಲ್ಲಾ ಯಾವ ತೀರ್ಮಾನ ಕೈಗೊಳ್ಳುತ್ತಾರೆಂದು ನೋಡೋಣ ಅಂತ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ತಿಳಿಸಿದರು.