ಸಿರುಗುಪ್ಪ : -ನಗರದ ಶ್ರೀ ಅಭಯಾಂಜನೇಯ್ಯ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲೂಕು ಕಾನೂನು ಸೇವೆಗಳ ಸಮಿತಿ, ಕಾರ್ಮಿಕ ಇಲಾಖೆ, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ, ಕಾರ್ಮಿಕರ ರಾಜ್ಯ ವಿಮಾ ಯೋಜನೆ, ವೈದ್ಯಕೀಯ ಸೇವೆ, ಭವಿಷ್ಯ ನಿಧಿ ಸಂಘಟನೆಗಳ ಸಹಯೋಗದಲ್ಲಿ ನಡೆದ ಕಾರ್ಮಿಕರ ಕಾಯ್ದೆಗಳ ಅನುಷ್ಠಾನದ ತಾಲೂಕು ಮಟ್ಟದ ಕಾರ್ಯಗಾರವನ್ನು ವಕೀಲರ ಸಂಘದ ಅಧ್ಯಕ್ಷ ಉಪ್ಪಾರ ವೆಂಕೋಬ ಅವರು ಉದ್ಘಾಟಿಸಿದರು.
ಉಪವಿಭಾಗ ಕಾರ್ಮಿಕ ಅಧಿಕಾರಿ ಸಿದ್ದಪ್ಪ.ಜಿ.ಖೈನೂರು ಅವರು ಮಾತನಾಡಿ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರು ಸರ್ಕಾರದಿಂದ ಮತ್ತು ಉದ್ದಿಮೆಗಳಿಂದ ಪಡೆಯಬಹುದಾದ ಸೌಲಭ್ಯಗಳನ್ನು, ವಿಮಾ ಸೌಲಭ್ಯ, ಮಹಿಳಾ ಕಾರ್ಮಿಕರ ಸೌಲಭ್ಯಗಳ ಬಗ್ಗೆ ವಿವರಣೆ ನೀಡಿ ಎಲ್ಲಾ ಕಾರ್ಮಿಕರು ತಮಗಿರುವ ಕಾಯ್ದೆಗಳ ಸದುಪಯೋಗವನ್ನು ಪಡೆಯಬೇಕು.
ಕಾರ್ಮಿಕರಿಗೆ ವೇತನ ತಾರತಮ್ಯ, ಕನಿಷ್ಟ ವೇತನದಲ್ಲಿ ಅನ್ಯಾಯ ಕಂಡುಬಂದಲ್ಲಿ ನಮ್ಮ ಇಲಾಖೆಗೆ ದೂರು ನೀಡಬೇಕೆಂದರು.
ಕಾರ್ಮಿಕ ನಿರೀಕ್ಷಕರಾದ,ರಮೇಶ್.ಜಿ ಅವರು ಮಾತನಾಡಿ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಕಡ್ಡಾಯ ಶಿಕ್ಷಣವನ್ನು ಕೊಡಿಸಬೇಕು.
6 ರಿಂದ 14 ವರ್ಷದ ಮಕ್ಕಳನ್ನು ಬಾಲಕಾರ್ಮಿಕ ಪದ್ದತಿಯ ನಿರ್ಮೂಲನೆಗೆ ಸರ್ಕಾರವು ಪರಿಣಾಮಕಾರಿ ಕಾಯ್ದೆಗಳ ಅನುಷ್ಠಾನಕ್ಕೆ ಮುಂದಾಗಿದೆ.ಅಲ್ಲದೇ 15 ರಿಂದ 18 ವರ್ಷದ ಕಿಶೋರಿ ವಯಸ್ಕ ಮಕ್ಕಳನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ದುಡಿಸಿಕೊಳ್ಳುವಂತಿಲ್ಲ ಎಂಬುದು ಸರ್ಕಾರದ ಕಾಯ್ದೆಯಾಗಿದೆಂದರು. ಕಾರ್ಯಕ್ರಮದಲ್ಲಿ ಕಾರ್ಮಿಕರಿಗೆ ಸಲಕರಣೆಗಳ ಕಿಟ್‌ಗಳನ್ನು ನೀಡಲಾಯಿತು.
ಇದೇ ವೇಳೆ ವಕೀಲರ ಸಂಘದ ಉಪಾಧ್ಯಕ್ಷ ಎಮ್.ಷರೀಪ್‌ಸಾಬ್, ಪ್ಯಾನಲ್ ವಕೀಲರಾದ ಟಿ.ವೆಂಕಟೇಶ ನಾಯ್ಕ್, ವಕೀಲರಾದ ಮಹೇಶ, ಸ್ವರೋಜ ಕಾರ್ಮಿಕ ನಿರೀಕ್ಷಕರಾದ ಮಂಜುನಾಥ.ಟಿ, ತಿರುಮಲೇಶ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ಎ.ಮೌನೇಶ ಹಾಗೂ ಇಲಾಖೆಯ ಅಧಿಕಾರಿ ವರ್ಗ, ಸಿಬ್ಬಂದಿಗಳು, ಕಾರ್ಮಿಕರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ