ಇತ್ತ ಭಾರತವು ಚಂದ್ರಯಾನ-3 ಯೋಜನೆಯ ಯಶಸ್ಸಿನಲ್ಲಿ ಮುಳುಗೇಳುತ್ತಿರುವಾಗ ಅತ್ತ ಅಮೆರಿಕದ ವಿಜ್ಞಾನಿಗಳು ಕೂಡ ಸದ್ದಿಲ್ಲದೆ ಬಾಹ್ಯಾಕಾಶ ಸಂಶೋಧನೆಯಲ್ಲಿ ದೊಡ್ಡದೊಂದು ಸಾಹಸ ಮಾಡಿದ್ದಾರೆ.
ನವದೆಹಲಿ: ಇತ್ತ ಭಾರತವು ಚಂದ್ರಯಾನ-3 ಯೋಜನೆಯ ಯಶಸ್ಸಿನಲ್ಲಿ ಮುಳುಗೇಳುತ್ತಿರುವಾಗ ಅತ್ತ ಅಮೆರಿಕದ ವಿಜ್ಞಾನಿಗಳು ಕೂಡ ಸದ್ದಿಲ್ಲದೆ ಬಾಹ್ಯಾಕಾಶ ಸಂಶೋಧನೆಯಲ್ಲಿ ದೊಡ್ಡದೊಂದು ಸಾಹಸ ಮಾಡಿದ್ದಾರೆ. ಏಳು ವರ್ಷಗಳ ಕಾಲ ಅಂತರಿಕ್ಷದಲ್ಲಿ ಪ್ರಯಾಣಿಸಿದ ಅಮೆರಿಕದ ನಾಸಾ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ನೌಕೆಯು ‘ಬೆನ್ನು’ ಎಂಬ ದೊಡ್ಡ ಕ್ಷುದ್ರಗ್ರಹವೊಂದರ ಮಾದರಿ ಸಂಗ್ರಹಿಸಿ ಯಶಸ್ವಿಯಾಗಿ ಯೂಟಾ ಮರುಭೂಮಿಯಲ್ಲಿ ಸಾಫ್ಟ್ ಲ್ಯಾಂಡ್ ಆಗಿದೆ.
2016ರಲ್ಲಿ ನಾಸಾ ಹಾರಿಬಿಟ್ಟಿದ್ದ ‘ಒಸಿರಿಸ್-ರೆಕ್ಸ್’ ನೌಕೆಯು ಬೆನ್ನು ಕ್ಷುದ್ರಗ್ರಹದಿಂದ ಹೆಚ್ಚುಕಮ್ಮಿ 250 ಗ್ರಾಂ ತೂಕದ ಮಾದರಿಯನ್ನು ಸಂಗ್ರಹಿಸಿ, ತನ್ನ ಕ್ಯಾಪ್ಸೂಲ್ ಮೂಲಕ ಭೂಮಿಗೆ ಕಳುಹಿಸಿದೆ. ಆ ಕ್ಯಾಪ್ಸೂಲ್ ಸೆ.24ರಂದು ಯೂಟಾ ಮರುಭೂಮಿಯಲ್ಲಿ ಇಳಿದಿದೆ. ಅದರೊಳಗಿರುವ ಪೆಟ್ಟಿಗೆಯಲ್ಲಿ ಬೆನ್ನು ಕ್ಷುದ್ರಗ್ರಹದಿಂದ ಸಂಗ್ರಹಿಸಿ ತಂದ ಕಲ್ಲು-ಮಣ್ಣು ರೂಪದ ಮಾದರಿಯಿದೆ. ಅದನ್ನು ಇನ್ನಷ್ಟೇ ವಿಜ್ಞಾನಿಗಳು ಅಧ್ಯಯನ ನಡೆಸಬೇಕಿದೆ.
ಒಸಿರಿಸ್-ರೆಕ್ಸ್ ನೌಕೆಯು ಸಂಗ್ರಹಿಸಿ ತಂದಿರುವ ಕ್ಷುದ್ರಗ್ರಹದ ಮಾದರಿಯು ಈವರೆಗೆ ಮನುಷ್ಯನು ಯಾವುದೇ ಕ್ಷುದ್ರಗ್ರಹದಿಂದ ತಂದ ಅತಿದೊಡ್ಡ ಮಾದರಿಯಾಗಿದೆ. ಈ ಹಿಂದೆ ಜಪಾನ್ನ ಅಂತರಿಕ್ಷ ನೌಕೆಯು ಕ್ಷುದ್ರಗ್ರಹದಿಂದ ಒಂದು ಟೀ ಸ್ಪೂನ್ನಷ್ಟು ಮಾದರಿಯನ್ನು ಸಂಗ್ರಹಿಸಿ ತಂದಿತ್ತು. ಈಗ ನಾಸಾ ತಂದಿರುವ ಮಾದರಿಯನ್ನು ಅಮೆರಿಕವು ಮೊದಲೇ ಕೊಟ್ಟ ಮಾತಿನಂತೆ ಜಗತ್ತಿನ 60 ಪ್ರಯೋಗಾಲಯಗಳ (200 ವಿಜ್ಞಾನಿಗಳ) ಜೊತೆ ಹಂಚಿಕೊಳ್ಳಲಿದೆ. ಅವರು ಬೆನ್ನು ಕ್ಷುದ್ರಗ್ರಹದ ಉಗಮ, ತನ್ಮೂಲಕ ಸೌರವ್ಯವಸ್ಥೆಯ ಹುಟ್ಟು, ಅದರಲ್ಲಿ ಭೂಮಿಯು ಹೇಗೆ ಮನುಷ್ಯನ ವಾಸಕ್ಕೆ ಯೋಗ್ಯವಾಗಿ ರೂಪುಗೊಂಡಿತು, ಬೆನ್ನು ಕ್ಷುದ್ರಹವು ಮುಂದೆ ಭೂಮಿಗೆ ಅಪ್ಪಳಿಸಿದರೆ ಆಗಬಹುದಾದ ಅಪಾಯ, ಅದನ್ನು ತಪ್ಪಿಸಲು ಕೈಗೊಳ್ಳಬೇಕಾದ ಕ್ರಮಗಳು ಮುಂತಾದ ಸಂಗತಿಗಳ ಬಗ್ಗೆ ಅಧ್ಯಯನ ನಡೆಸಲಿದ್ದಾರೆ.
ಬೆನ್ನು ಕ್ಷುದ್ರಗ್ರಹದಿಂದ ತಂದ ಮಾದರಿಯನ್ನು ನಾಸಾ ವಿಜ್ಞಾನಿಗಳು ಅ.11ರಂದು ಜನರಿಗೆ ತೋರಿಸಿ, ಅದರ ಬಗ್ಗೆ ಆರಂಭಿಕ ಮಾಹಿತಿ ನೀಡಲಿದ್ದಾರೆ.
ಅತ್ಯಂತ ಕಷ್ಟದ ಲ್ಯಾಂಡಿಂಗ್ ಪ್ರಕ್ರಿಯೆ ಯಶಸ್ವಿ
ಒಸಿರಿಸ್-ರೆಕ್ಸ್ ನೌಕೆಯು ಭಾನುವಾರ ಬೆಳಗ್ಗೆ ಭೂಮಿಯಿಂದ ಸುಮಾರು 1 ಲಕ್ಷ ಕಿ.ಮೀ. ದೂರದಲ್ಲಿ ಬೆನ್ನು ಕ್ಷುದ್ರಗ್ರಹದ ಮಾದರಿಯನ್ನು ಹೊತ್ತ ಕ್ಯಾಪ್ಸೂಲನ್ನು ಬಿಡುಗಡೆ ಮಾಡಿತು. ಅದು ಭೂಮಿಯತ್ತ ಗಂಟೆಗೆ 27,000 ಮೈಲು ವೇಗದಲ್ಲಿ ನುಗ್ಗಿಬಂತು. ಒಟ್ಟು ನಾಲ್ಕು ತಾಸು ಪ್ರಯಾಣಿಸಿ, ಲ್ಯಾಂಡ್ ಆಗುವುದಕ್ಕಿಂತ 13 ನಿಮಿಗಳ ಮೊದಲು ಭೂಮಿಯ ವಾತಾವರಣ ಪ್ರವೇಶಿಸಿತು. ಆಗ ಅದರ ಉಷ್ಣತೆ 2760 ಡಿಗ್ರಿ ಸೆಲ್ಸಿಯಸ್ನಷ್ಟಿತ್ತು. ಭೂಮಿಯ ವಾತಾವರಣವನ್ನು ಪ್ರವೇಶಿಸುತ್ತಿದ್ದಂತೆ ಅದಕ್ಕೆ ಜೋಡಿಸಿದ್ದ ಪ್ಯಾರಾಶೂಟ್ಗಳು ಬಿಚ್ಚಿಕೊಂಡು, ಕ್ಯೂಪ್ಸೂಲ್ನ ವೇಗವನ್ನು ಗಂಟೆಗೆ 11 ಮೈಲಿಗೆ ತಗ್ಗಿಸಿದವು. ಬಳಿಕ ಅದು ಮರುಭೂಮಿಯ ಮೇಲೆ ಮೆತ್ತಗೆ ಬಿದ್ದಿತು. ಇದು ಅತ್ಯಂತ ಕಷ್ಟದ ಲ್ಯಾಂಡಿಂಗ್ ಪ್ರಕ್ರಿಯೆ ಎನ್ನಲಾಗಿದ್ದು, ಜಗತ್ತಿನಾದ್ಯಂತ ವಿಜ್ಞಾನಿಗಳು ಕುತೂಹಲದಿಂದ ವೀಕ್ಷಿಸುತ್ತಿದ್ದರು.
ಕ್ಷುದ್ರಗ್ರಹದಿಂದ ಮಾದರಿ ತಂದಿದ್ದೇಕೆ?
ಸೌರವ್ಯೂಹದಲ್ಲಿ ಗ್ರಹಗಳ ನಡುವೆ ಅಡ್ಡಾದಿಡ್ಡಿಯಾಗಿ ಸಂಚರಿಸುತ್ತಿರುವ ಅನೇಕ ಕ್ಷುದ್ರಗ್ರಹಗಳಿವೆ. ಅವು 450 ಲಕ್ಷ ವರ್ಷಗಳ ಹಿಂದೆ ಸೌರವ್ಯೂಹ ರಚನೆಯಾದಾಗ ತಮ್ಮೊಳಗೆ ಇದ್ದ ವಸ್ತುಗಳನ್ನು ಮೂಲ ಸ್ವರೂಪದಲ್ಲೇ ಈಗಲೂ ಉಳಿಸಿಕೊಂಡಿವೆ. ಸುಮಾರು 500 ಮೀಟರ್ ಸುತ್ತಳತೆಯ ಬೆನ್ನು ಕ್ಷುದ್ರಗ್ರಹವು ಇಂಗಾಲದಿಂದ ತುಂಬಿದ್ದು, ಅದರಲ್ಲಿ ನೀರಿನ ಕಣಗಳು ಇರುವ ಸಾಧ್ಯತೆಯಿದೆ. ಈ ಕ್ಷುದ್ರಗ್ರಹ ಸೂರ್ಯನನ್ನು 81 ದಶಲಕ್ಷ ಕಿ.ಮೀ. ದೂರದಲ್ಲಿ ಸುತ್ತುತ್ತಿದೆ. ಇದು ದೊಡ್ಡ ಕ್ಷುದ್ರಗ್ರಹದಿಂದ ಬೇರ್ಪಟ್ಟ ಸಣ್ಣ ತುಂಡು ಎಂದು ಹೇಳಲಾಗಿದೆ. ಈ ಕ್ಷುದ್ರಗ್ರಹ 2182ನೇ ಇಸ್ವಿಯಲ್ಲಿ ಭೂಮಿಗೆ ಅತ್ಯಂತ ಸನಿಹಕ್ಕೆ ಬರಲಿದೆ. ಆಗ ಅದು ಭೂಮಿಗೇನಾದರೂ ಅಪ್ಪಳಿಸಿದರೆ ಏನಾಗಬಹುದು? ಅದನ್ನು ತಪ್ಪಿಸಲು ಏನು ಮಾಡಬಹುದು? ಈ ಕ್ಷುದ್ರಗ್ರಹ ಹುಟ್ಟಿದ್ದು ಹೇಗೆ? ಇದರಲ್ಲಿ ಭೂಮಿಯ ಅಥವಾ ಇನ್ನಾವುದೇ ಗ್ರಹದ ಅಥವಾ ಇಡೀ ಸೌರವ್ಯವಸ್ಥೆಯ ಹುಟ್ಟಿನ ಬಗ್ಗೆ ಯಾವ ರಹಸ್ಯಗಳು ಅಡಗಿವೆ ಎಂಬುದನ್ನು ಪತ್ತೆಹಚ್ಚುವುದು ನಾಸಾದ ಉದ್ದೇಶವಾಗಿದೆ.
‘ಬೆನ್ನು’ ಕ್ಷುದ್ರಗ್ರಹ ಹೇಗಿದೆ?
ಬೆನ್ನು ಕ್ಷುದ್ರಗ್ರಹ ಗಟ್ಟಿಯಾಗಿರಬಹುದು, ಅದು ಭೂಮಿಗೆ ಅಪ್ಪಳಿಸಿದರೆ ಭಾರೀ ಹಾನಿಯಾಗಬಹುದು ಎಂಬ ನಿರೀಕ್ಷೆ ವಿಜ್ಞಾನಿಗಳದ್ದಾಗಿತ್ತು. ಆದರೆ ಒಸಿರಿಸ್-ರೆಕ್ಸ್ ನೌಕೆ 2020ರಲ್ಲಿ ಅದರ ಮೇಲೆ ಇಳಿದಾಗ ‘ಬೆನ್ನು’ವಿನ ಮೇಲ್ಮೈ ಮೆತ್ತಗಿರುವುದು ಕಂಡುಬಂದಿತು. ಅದರ ಮೇಲಿನ ಮಣ್ಣು ಹಾಗೂ ಸಣ್ಣಪುಟ್ಟ ಕಲ್ಲಿನ ಹರಳುಗಳು ಬಹಳ ಮೆತ್ತಗಿದ್ದವು. ಒಸಿರಿಸ್ ನೌಕೆಯ ಕೈ ಆ ಮಣ್ಣಿನಲ್ಲಿ ಸಲೀಸಾಗಿ ಒಳಗೆ ಹೋಗಿ ನಿರೀಕ್ಷೆಗಿಂತ ಹೆಚ್ಚು ಮಾದರಿಯನ್ನು ಮೇಲೆತ್ತಿ ಪೆಟ್ಟಿಗೆಯೊಳಗೆ ತುಂಬಿಕೊಂಡಿತ್ತು.
ಬೇರೆ ಕ್ಷುದ್ರಗ್ರಹಕ್ಕೆ ಹೊರಟ ಒಸಿರಿಸ್-ರೆಕ್ಸ್!
2016ರಲ್ಲಿ ನಾಸಾ ಹಾರಿಬಿಟ್ಟ ಒಸಿರಿಸ್-ರೆಕ್ಸ್ ನೌಕೆ ಮರುಬಳಕೆಯ ಬಾಹ್ಯಾಕಾಶ ನೌಕೆಯಾಗಿದೆ. ಅದು ಬೆನ್ನು ಕ್ಷುದ್ರಗ್ರಹದ ಮೇಲೆ 2020ರಲ್ಲಿ ಲ್ಯಾಂಡ್ ಆಗಿ, ಮಾದರಿ ಸಂಗ್ರಹಿಸಿ, ಅಲ್ಲಿಂದ ಮತ್ತೆ ಭೂಮಿಯತ್ತ ಸಂಚರಿಸಿ, ಕ್ಷುದ್ರಗ್ರಹದ ಮಾದರಿಯನ್ನು ಹೊತ್ತ ಒಂದು ಕ್ಯಾಪ್ಸೂಲನ್ನು ಭೂಮಿಗೆ ಈಗ ಕಳುಹಿಸಿದೆ. ಈ ಅವಧಿಯಲ್ಲಿ ನೌಕೆಯು 620 ಲಕ್ಷ ಕಿ.ಮೀ. ಸಂಚಾರ ಮಾಡಿದೆ. ಈಗ ಒಸಿರಿಸ್-ರೆಕ್ಸ್ ನೌಕೆ ‘ಅಪೋಫಿಸ್’ ಎಂಬ ಇನ್ನೊಂದು ಕ್ಷುದ್ರಗ್ರಹದತ್ತ ತೆರಳಿದೆ. 2029ರಲ್ಲಿ ಅದು ಅಪೋಫಿಸ್ ತಲುಪಿ, ಅದರ ಮಾದರಿ ಸಂಗ್ರಹಿಸಿ, ಭೂಮಿಗೆ ಮರಳುವ ನಿರೀಕ್ಷೆಯಿದೆ.