Join The Telegram | Join The WhatsApp |
ಮುಂಬೈ : ಮದುವೆಯ ಶುಭ ಸಮಯವನ್ನು ಮೀರಿ ಗಂಟೆಗಟ್ಟಲೇ ಕಲ್ಯಾಣ ಮಂಟಪದಲ್ಲೇ ಡಾನ್ಸ್ ಮಾಡುತ್ತಿದ್ದ ವರನ ವರ್ತನೆಯಿಂದ ಬೇಸತ್ತ ವಧುವೊಬ್ಬಳು ವಿವಾಹವನ್ನೇ ರದ್ದು ಮಾಡಿ ಬೇರೊಬ್ಬನ ಜೊತೆ ಸಪ್ತಪದಿ ತುಳಿದ ವಿಚಿತ್ರ ಘಟನೆ ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯಲ್ಲಿ ನಡೆದಿದೆ.
ಖುಷಿಯನ್ನು ತಡೆಯಲಾರದೇ ತಡರಾತ್ರಿ ತನ್ನದೇ ಮದುವೆ ಸಮಾರಂಭದಲ್ಲಿ ಸಿಕ್ಕಾಪಟ್ಟೆ ಕುಣಿದಿದ್ದು ವರನಿಗೆ ಶಾಪವಾಗಿ ಪರಿಣಮಿಸಿದೆ. ಅದೇ ಮಂಟಪದಲ್ಲಿ ವಧು, ತನ್ನ ಸ್ನೇಹಿತನ ಜೊತೆ ವಿವಾಹ ಮಾಡಿಕೊಂಡಿದ್ದಾರೆ. ಈ ಘಟನೆ ಬುಲ್ಧಾನಾ ಜಿಲ್ಲೆಯ ಮಲ್ಕಪುರ್ ಪಂಗ್ರಾ ಗ್ರಾಮದಲ್ಲಿ ನಡೆದಿದೆ.
ವರದಿಗಳ ಪ್ರಕಾರ ವರ, ಸರಿಯಾದ ಸಮಯಕ್ಕೆ ವಧುವಿನ ಮನೆಯನ್ನು ತಲುಪಬೇಕಿತ್ತು. ಆದರೆ, ಅದಾಗಲೇ ಮದುವೆಯ ಮೆರವಣಿಗೆಯು ತುಂಬಾ ತಡವಾಗಿ ಶುಭ ಮುಹೂರ್ತವನ್ನು ಮೀರಿತ್ತು. ವಧು ಮತ್ತು ಆಕೆಯ ಮನೆಯವರು ಸಾಕಷ್ಟು ಕಾದರೂ ವರನ ಸುಳಿವು ಮಾತ್ರ ಸಿಗಲೇ ಇಲ್ಲ. ಇತ್ತ ಮದುವೆಗೆ ಬಂದಿದ್ದವರು ಕಂಠಪೂರ್ತಿ ಕುಡಿದು ಡಾನ್ಸ್ನಲ್ಲಿ ಮಗ್ನರಾಗಿದ್ದರು. ಸ್ನೇಹಿತರೆಲ್ಲರು ಡಾನ್ಸ್ ಮಾಡುವುದನ್ನು ನೋಡಿದ ವರ, ತಾನು ಕೂಡ ಕಾರಿನಿಂದ ಕೆಳಗೆ ಇಳಿದು ಪಾನಮತ್ತ ಸ್ನೇಹಿತರ ಜೊತೆ ಕುಣಿಯಲು ಶುರು ಮಾಡಿದ.
ಹಲವಾರು ಗಂಟೆಗಳ ಕಾಲ ಕಾದ ನಂತರ, ವಧುವಿನ ತಂದೆ ನೃತ್ಯವನ್ನು ನಿಲ್ಲಿಸಿ ಮದುವೆಗೆ ಬರುವಂತೆ ವರನನ್ನು ವಿನಂತಿಸಿದಾಗ, ಆತನ ಪಾನಮತ್ತ ಸ್ನೇಹಿತರು ವಧುವಿನ ತಂದೆ ಮತ್ತು ಕುಟುಂಬದ ಇತರ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ಗಟಾಲೆ ಜೋರಾಗಿ ನಡೆಯಿತು. ಇದರಿಂದ ಬೇಸತ್ತ ವಧು, ಅಲ್ಲಿಯೇ ಮದುವೆಯನ್ನು ರದ್ದು ಮಾಡಿಕೊಂಡಳು. ವಧುವಿನ ನಿರ್ಧಾರ ವರನ ಕುಟುಂಬವನ್ನು ಶಾಕ್ಗೆ ದೂಡಿತು.
ಅವಮಾನದಿಂದ ತಪ್ಪಿಸಿಕೊಳ್ಳುವ ಸಲುವಾಗಿ ವಧುವಿನ ಕುಟುಂಬವು ಅವಳನ್ನು ಬೇರೆ ಪುರುಷನೊಂದಿಗೆ ಮದುವೆ ಮಾಡಲು ನಿರ್ಧರಿಸಿತು. ಬಳಿಕ ವಧುವನ್ನು ಆಕೆಯ ಸ್ನೇಹಿತನಿಗೆ ಕೊಟ್ಟು ಮದುವೆ ಮಾಡಲಾಯಿತು. ಮರುದಿನ ವರನ ಮನೆಯವರು ಕೂಡ ಮದುವೆ ನಿಶ್ಚಯಿಸಿ ಬೇರೊಂದು ಹುಡುಗಿಯನ್ನು ಮದುವೆ ಮಾಡಿಕೊಂಡರು.
Join The Telegram | Join The WhatsApp |