ದಾವಣಗೆರೆ: ಛತ್ತೀಸ್ಗಢದಲ್ಲಿ ಸೇವೆ ಸಲ್ಲಿಸುತ್ತಿದ್ದ ದಾವಣಗೆರೆಯ ಸಿಆರ್ಪಿಎಫ್ ಯೋಧನೋರ್ವ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ದಾವಣಗೆರೆ ತಾಲೂಕಿನ ಕೈದಾಳೆ ಗ್ರಾಮದ ನಿವಾಸಿ ಉಮೇಶ್ (34) ಆತ್ಮಹತ್ಯೆ ಮಾಡಿಕೊಂಡವರು. ಸಾಲಬಾಧೆ ಹಾಗೂ ಜೀವನದಲ್ಲಿ ಜುಗುಪ್ಸೆ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಕಳೆದೊಂದು ತಿಂಗಳ ಹಿಂದೆ ರಜೆಗಾಗಿ ಗ್ರಾಮಕ್ಕೆ ಬಂದಿದ್ದ ಉಮೇಶ್ ಅವರು ರಜೆ ಮುಗಿಸಿ ಡ್ಯೂಟಿಗೆ ಮತ್ತೆ ಹೊರಟಿದ್ದರು. ಆದರೆ ಕೈದಾಳೆ ಗ್ರಾಮದಿಂದ ಛತ್ತೀಸ್ಗಢಕ್ಕೆ ತೆರಳುವ ಮಾರ್ಗಮಧ್ಯೆ ಸೋಮವಾರ ಮುಂಜಾನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಯೋಧನ ಆತ್ಮಹತ್ಯೆ ಬಗ್ಗೆ ಸಿಆರ್ಪಿಎಫ್ ಕಮಾಂಡ್ ಖಚಿತಪಡಿಸಿದೆ. ಸೇನಾಧಿಕಾರಿಗಳು ಕುಟುಂಬಸ್ಥರಿಗೆ ಮಾಹಿತಿ ರವಾನಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಗ್ರಾಮಕ್ಕೆ ಆಗಮಿಸಿದ ಪಾರ್ಥಿವ ಶರೀರ: ಯೋಧ ಉಮೇಶ್ ಪಾರ್ಥಿವ ಶರೀರ ಮಂಗಳವಾರ ತಡರಾತ್ರಿ ಕೈದಾಳೆ ಗ್ರಾಮಕ್ಕೆ ಆಗಮಿಸಿದೆ. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಛತ್ತೀಸ್ಗಢದ ಕೊಂಟಾ ಬೆಟಲಿಯನ್ 217ರಲ್ಲಿ ಅವರು ಕೆಲಸ ಮಾಡುತ್ತಿದ್ದರು. ಬುಧವಾರ ಮಧ್ಯಾಹ್ನ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.