Join The Telegram | Join The WhatsApp |
ತೆಲಂಗಾಣ : ತವರು ಮನೆಯಿಂದ ಬಾರದ ಹೆಂಡತಿಗೆ ಮರಳಿ ಬರುವಂತೆ ಒತ್ತಾಯಿಸಿ ವ್ಯಕ್ತಿಯೊಬ್ಬ ತನ್ನ ಮಗಳನ್ನು ಉಸಿರುಗಟ್ಟಿಸಿ ಕೊಂದಿರುವ ಆಘಾತಕಾರಿ ಘಟನೆ ತೆಲಂಗಾಣದ ಮಹೆಬೂಬ್‌ನಗರದಲ್ಲಿ ಬುಧವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಮಹೆಬೂಬನಗರ ಜಿಲ್ಲೆಯ ಪಾಲಕೊಂಡ ತಾಂಡಾದ ಶಿವ ಎಂದು ಗುರುತಿಸಲಾಗಿದೆ. ಬುಧವಾರ ಈ ಘಟನೆ ನಡೆದಿದೆ ಎಂದು ಗ್ರಾಮಾಂತರ ಠಾಣೆ ಎಸ್‌ಐ ವೆಂಕಟೇಶ್ವರಲು ಹೇಳಿದ್ದಾರೆ.
ಪತಿಯೊಂದಿಗೆ ಜಗಳವಾಡಿಕೊಂಡು ಪೋಷಕರ ಮನೆಗೆ ತೆರಳಿದ್ದ ಪತ್ನಿ ಶೋಭಾಳನ್ನು ವಾಪಸ್ ಬರುವಂತೆ ಮನವೊಲಿಸಲು ಶಿವ ಅಲ್ಲಿಗೆ ತೆರಳಿದ್ದ. ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ಅಂಗಡಿಯೊಂದರಲ್ಲಿ ತನ್ನ ಹಿರಿಯ ಮಗಳು ಕೀರ್ತನಾ (6)ಳನ್ನು ಶಿವ ನೋಡಿದ್ದಾನೆ. ಮಗಳನ್ನು ಕರೆದುಕೊಂಡು ಹೋದರೆ ಹೆಂಡತಿಗೆ ಮನೆಗೆ ಬಂದೇ ಬರುತ್ತಾಳೆ ಎಂದು ಆತ ಯೋಚಿಸಿದ್ದಾನೆ.
ಮಗಳ ಬಳಿ ಹೋಗಿ ತನ್ನೊಂದಿಗೆ ಬರುವಂತೆ ಕೇಳಿಕೊಂಡಿದ್ದಾನೆ. ಆದರೆ ಮಗಳು ಆತನೊಂದಿಗೆ ಹೋಗಲು ನಿರಾಕರಿಸಿದ್ದಾಳೆ. ಮಗಳಿಗೆ ಹಲವಾರು ಆಮಿಷ ಒಡ್ಡಿದರೂ ಆಕೆ ಒಪ್ಪಿಲ್ಲ. ಕೊನೆಗೆ ಬಾಲಕಿ ಅಳಲು ಪ್ರಾರಂಭಿಸಿದಾಗ, ಶಿವ ಸ್ವಲ್ಪ ಕೋಪದಿಂದ ಅವಳ ಬಾಯಿ ಮತ್ತು ಮೂಗನ್ನು ಒತ್ತಿ ಹಿಡಿದು ಬಲವಂತವಾಗಿ ಕರೆದೊಯ್ಯಲು ಪ್ರಯತ್ನಿಸಿದ್ದಾನೆ. ಆದರೆ ಇದರಿಂದ ಉಸಿರುಗಟ್ಟಿದ ಬಾಲಕಿ ರಸ್ತೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗಳನ್ನು ಶಿವ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಬಾಲಕಿಗೆ ಪ್ರಜ್ಞೆ ಬರದ ಕಾರಣ ಶಿವ ತನ್ನ ತಂದೆಯೊಂದಿಗೆ ಮಧ್ಯರಾತ್ರಿ ಆಕೆಯನ್ನು ಮಹೆಬೂಬ್‌ನಗರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾನೆ.
ಆದರೆ, ಆಕೆಯನ್ನು ಪರೀಕ್ಷಿಸಿದ ವೈದ್ಯರು ಬಾಲಕಿ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ವಿಷಯ ತಿಳಿದ ಪತ್ನಿ ಶೋಭಾ ಪೊಲೀಸರಿಗೆ ದೂರು ನೀಡಿದ್ದರು. ಪತಿಯೇ ತಮ್ಮ ಮಗಳನ್ನು ಕೊಂದಿದ್ದಾರೆ ಎಂದು ಆರೋಪಿಸಿರುವ ಶೋಭಾ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಕೂಲಿ ಕಾರ್ಮಿಕನಾಗಿದ್ದ ಶಿವ ಏಳು ವರ್ಷಗಳ ಹಿಂದೆ ಶೋಭಾಳನ್ನು ಮದುವೆಯಾಗಿದ್ದ. ಮೃತ ಕೀರ್ತನಾ ಅಲ್ಲದೆ, ದಂಪತಿಗೆ ಇನ್ನೋರ್ವ ಪುತ್ರಿ ಮತ್ತು ಪುತ್ರ ಇದ್ದಾರೆ. ಶಿವನಿಗೆ ಕುಡಿತದ ಚಟವಿದ್ದು, ಆಗಾಗ ಕುಡಿದು ಮನೆಗೆ ಬಂದು ಪತ್ನಿಗೆ ಥಳಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪದೇ ಪದೆ ಹಲ್ಲೆ ನಡೆಯುತ್ತಿದ್ದುದನ್ನು ಸಹಿಸಲಾಗದೇ 10 ದಿನಗಳ ಹಿಂದೆ ಪತ್ನಿ ಶೋಭಾ ಮಕ್ಕಳನ್ನು ಕರೆದುಕೊಂಡು ಪೋಷಕರ ಮನೆಗೆ ಹೋಗಿದ್ದರು. ಮನೆಗೆ ಹಿಂತಿರುಗುವಂತೆ ಅನೇಕ ಬಾರಿ ಕೇಳಿದ್ದರೂ ಆಕೆ ಒಪ್ಪಿರಲಿಲ್ಲ.
Join The Telegram | Join The WhatsApp |