Join The Telegram | Join The WhatsApp |
ಬೆಂಗಳೂರು: ‘ಲಂಚ ನೀಡಲು ಹಣವಿಲ್ಲ. ಲಂಚದ ಬದಲು ಪೋಷಕರು ಬೆಳೆದಿರುವ ದವಸ ಧಾನ್ಯಗಳನ್ನೇ ಸರ್ಕಾರಕ್ಕೆ ನೀಡುತ್ತೇವೆ. ಉದ್ಯೋಗ ನೀಡಲಿ’ ಎಂದು ಪಿಎಸ್‌ಐ ಹುದ್ದೆ ಆಕಾಂಕ್ಷಿಗಳು ಅಳಲು ತೋಡಿಕೊಂಡಿದ್ದಲ್ಲದೆ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಧಾನ್ಯದ ಗಂಟನ್ನು ನೀಡಿದರು. ನಗರದ ಫ್ರೀಡಂ ಪಾರ್ಕ್‌ನಲ್ಲಿ ‘ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳ ಒಕ್ಕೂಟ’ದ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಸಿದ್ದರಾಮಯ್ಯ ಅವರು ಮಂಗಳವಾರ ಭೇಟಿ ನೀಡಿ ಆಕಾಂಕ್ಷಿಗಳ ಅಳಲು ಆಲಿಸಿದಾಗ ನಡೆದ ಘಟನೆ ಇದು. ಆಗ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ‘ನೀವು ನನಗೆ ಕೊಟ್ಟಿರುವ ಈ ಧಾನ್ಯದ ಗಂಟನ್ನು ಸರ್ಕಾರಕ್ಕೆ ತಲುಪಿಸುವ ಕೆಲಸ ಮಾಡುತ್ತೇನೆ’ ಎಂದು ಭರವಸೆ ನೀಡಿದರು. ನಂತರ, ಮಂಗಳವಾರ ಮಧ್ಯಾಹ್ನ ವಿಧಾನಸಭೆಯಲ್ಲಿ ಪಿಎಸ್‌ಐ ನೇಮಕಾತಿ ಅಕ್ರಮದ ಕುರಿತು ನಡೆದ ಚರ್ಚೆಯ ವೇಳೆ ಅವರು ಅಕ್ಕಿ–ಬೇಳೆಯ ಗಂಟನ್ನು ಸ್ಪೀಕರ್ ಕಾಗೇರಿಯವರ ಮೂಲಕ ಸರ್ಕಾರಕ್ಕೆ ಹಸ್ತಾಂತರಿಸಿದರು. ಎಲ್ಲ ನೇಮಕಾತಿಯ ತನಿಖೆ ನಡೆಸಲಿ: ‘ಕಿಮ್ಮನೆ ರತ್ನಾಕರ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸ್ಥಾನವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದರು. ಸರ್ಕಾರವು ಭ್ರಷ್ಟಾಚಾರ ಮುಚ್ಚಿಕೊಳ್ಳಲು ಕಿಮ್ಮನೆ ರತ್ನಾಕರ ಅಧಿಕಾರದ ಅವಧಿಯಲ್ಲೂ ಭ್ರಷ್ಟಾಚಾರ ನಡೆದಿತ್ತು ಎಂಬ ಸುಳ್ಳು ಆರೋಪ ಮಾಡುತ್ತಿದೆ. 2006ರಿಂದ ಈ ವರೆಗೆ ನಡೆದಿರುವ ಎಲ್ಲ ನೇಮಕಾತಿ ಬಗ್ಗೆಯೂ ತನಿಖೆ ನಡೆಸಲಿ’ ಎಂದು ಫ್ರೀಡಂ ಪಾರ್ಕ್‌ನಲ್ಲಿ ಅವರು ಸವಾಲು ಹಾಕಿದರು. ‘ಮತ್ತೆ ನಾವು ಅಧಿಕಾರಕ್ಕೆ ಬಂದರೆ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ರೂಪಿಸುತ್ತೇವೆ. ಕೇಂದ್ರ ಲೋಕಸೇವಾ ಆಯೋಗದಲ್ಲಿ ಅಧ್ಯಕ್ಷರಾಗಿದ್ದ ಹೂಟ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ, ಅವರಿಂದ ಶಿಫಾರಸು ಪಡೆದು ಕೆಲವು ಜಾರಿ ಮಾಡಿದ್ದೆವು. ಇನ್ನು ಕೆಲವು ಉಳಿದಿವೆ’ ಎಂದರು. ಪಿಎಸ್‌ಐ ನೇಮಕಾತಿಯಲ್ಲಿ ಲಂಚ ಕೊಟ್ಟು ಪರೀಕ್ಷೆಯಲ್ಲಿ ಖಾಲಿ ಉತ್ತರ ಪತ್ರಿಕೆ ಉಳಿಸಿ ಹೋಗಿ ನೇಮಕವಾಗಿದ್ದರು. ದುಡ್ಡಿದ್ದವರು ಲಂಚ ನೀಡುತ್ತಾರೆ. ದುಡ್ಡು ಇಲ್ಲದವರು ಏನು ಮಾಡಬೇಕು? ಈ ರೀತಿ ಅಕ್ರಮ ವಿರೋಧಿಸೋಣ ಎಂದು ಕರೆ ನೀಡಿದರು.
Join The Telegram | Join The WhatsApp |