Join The Telegram | Join The WhatsApp |
ಬೆಂಗಳೂರು: ‘ಶಿಕ್ಷಕರ ನೇಮಕಾತಿ ಅಕ್ರಮ ಅಧಿಕಾರಿಗಳ ಮಟ್ಟದಲ್ಲಿ ನಡೆದಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಾಗಲಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಾಗಲಿ ಈ ಅಕ್ರಮ ನಡೆದಿಲ್ಲ’ ಎಂದು ಮಾಜಿ ಶಿಕ್ಷಣ ಸಚಿವ, ಕಾಂಗ್ರೆಸ್ ಮುಖಂಡ ಕಿಮ್ಮನೆ ರತ್ನಾಕರ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಇದರಲ್ಲಿ ನಮ್ಮ ಹಸ್ತಕ್ಷೇಪ ಇದ್ದರೆ ಸಾಕ್ಷ್ಯಗಳನ್ನು ನೀಡಲಿ. ನೇರ ಆರೋಪ ಇದ್ದರೆ ಪ್ರತಿಕ್ರಿಯೆ ನೀಡಲು ಸಿದ್ಧ’ ಎಂದರು. ‘ಈ ಅಕ್ರಮದ ದಾಖಲೆಗಳನ್ನು ನೀಡುವಂತೆ ಇಲಾಖೆಗೆ ಪತ್ರ ಬರೆದಿದ್ದೇನೆ. ಯಾರೇ ದಾಖಲೆ ತಿರುಚಿ, ನಕಲಿ ದಾಖಲೆ ಮೂಲಕ ನೇಮಕಾತಿಯಾಗಿದ್ದರೆ ಅಂಥವರನ್ನು ಶಿಕ್ಷೆಗೆ ಗುರಿಪಡಿಸಬೇಕು. ಇಲಾಖೆಯಲ್ಲಿನ ಅಧಿಕಾರಿಗಳ ಸಹಾಯ ಇಲ್ಲದೆ ಈ ರೀತಿ ಅಕ್ರಮ ಸಾಧ್ಯವಿಲ್ಲ. ನಕಲಿ ದಾಖಲೆ ಸಲ್ಲಿಸಿರುವವರು ಹಾಗೂ ಅಭ್ಯರ್ಥಿಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಪೂರೈಸಿರುವವರನ್ನು ಶಿಕ್ಷೆಗೆ ಗುರಿಪಡಿಸಬೇಕು. ಈ ನೇಮಕಾತಿ ವಿಚಾರ ಆರ್ಥಿಕ ಇಲಾಖೆ ಒಪ್ಪಿಗೆ ಪಡೆಯುವುದಕ್ಕಾಗಿ ಸಚಿವರ ವ್ಯಾಪ್ತಿಗೆ ಬರುತ್ತದೆಯೇ ಹೊರತು, ನೇಮಕಾತಿ ಪ್ರಕ್ರಿಯೆ ಬರುವುದಿಲ್ಲ’ ಎಂದೂ ಸ್ಪಷ್ಟಪಡಿಸಿದರು. ‘ಈ ನೇಮಕಾತಿ ಎರಡು ಬಾರಿ ನಡೆದಿದೆ. 2012ರ ಏಪ್ರಿಲ್ 2ಕ್ಕೆ ಮೊದಲ ನೇಮಕಾತಿ ಪ್ರಕ್ರಿಯೆ ಆರಂಭವಾಗಿ 2012ರಲ್ಲಿ ಡಿ. 26ಕ್ಕೆ ಮುಕ್ತಾಯವಾಗಿದೆ. ಆಗ ವಿಶ್ವೇಶ್ವರ ಹೆಗಡೆ ಕಾಗೇರಿ ಶಿಕ್ಷಣ ಸಚಿವರಾಗಿದ್ದರು. ನನ್ನ ಅವಧಿಯಲ್ಲಿ 2015ರಲ್ಲಿ ನೇಮಕಾತಿ ಆಗಿತ್ತು. ಈ ರೀತಿ ನೇಮಕಾತಿಯಲ್ಲಿ ಹಗರಣ ಆಗಿದೆ ಎಂದು ಮಾಧ್ಯಮದಲ್ಲಿ ಬಂದಾಗ ಸಚಿವಾಲಯದ ಅಧಿಕಾರ ವ್ಯಾಪ್ತಿಯನ್ನು ತಿಳಿಸುವುದು ಉತ್ತಮ’ ಎಂದು ಹೇಳಿದರು.
Join The Telegram | Join The WhatsApp |