ತುರುವೇಕೆರೆ: –ತಾಲೂಕು ಆಡಳಿತ, ತಾಪಂ, ಶಿಕ್ಷಣ ಇಲಾಖೆ ನಡೆಸಿದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 136 ನೇ ಜನ್ಮಜಯಂತಿ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳಲ್ಲದವರೂ ವೇದಿಕೆ ಮೇಲೆ ಆಸೀನರಾಗಿದ್ದು ಸರ್ಕಾರಿ ಕಾರ್ಯಕ್ರಮದ ಶಿಷ್ಠಾಚಾರ ಪರಿಪಾಲನೆಯಾಗಿರಲಿಲ್ಲ.
ಪಟ್ಟಣದ ಶ್ರೀ ಸ್ವಾಮಿ ವಿವೇಕಾನಂದ ಪಪೂ ಕಾಲೇಜಿನಲ್ಲಿ ನಡೆದ ಶಿಕ್ಷಣ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಂ.ಟಿ.ಕೃಷ್ಣಪ್ಪ, ಕೋಟ್ಯಾಂತರ ರೂ ಖರ್ಚು ಮಾಡಿ ಕ್ರೀಡಾಂಗಣ, ಗುರುಭವನ, ಕೆ.ಹಿರಣ್ಣಯ್ಯ ರಂಗಮಂದಿರ ನಿರ್ಮಾಣ ಮಾಡಲಾಗಿದೆ. ಆ ಸ್ಥಳದಲ್ಲಿ ಸರ್ಕಾರಿ ಕಾರ್ಯಕ್ರಮಗಳನ್ನು ನಡೆಸಿ, ಅದನ್ನು ಬಿಟ್ಟು ಇಂದು ಇಲ್ಲಿ ಶಿಕ್ಷಕರ ದಿನಾಚರಣೆ ನಡೆಸುತ್ತಿದ್ದೀರಿ, ಸಾಕಷ್ಟು ಮಂದಿ ಶಿಕ್ಷಕರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇಲ್ಲ, ಮತ್ತಷ್ಟು ಮಂದಿ ಗುರುಗಳು ಭವನದ ಹೊರಗೆ ನಿಂತಿದ್ದಾರೆ ಇದು ಸರಿಯಾದ ವ್ಯವಸ್ಥೆ ಅಲ್ಲ ಎಂದು ಕಿಡಿಕಾರಿದರು.
ಭಾರತ ದೇಶ ವಿಜ್ಞಾನ, ತಂತ್ರಜ್ಞಾನದಲ್ಲಿ ಸಾಕಷ್ಟು ಬೆಳೆದಿದೆ. ಚಂದ್ರಯಾನದ ಮೂಲಕ ಚಂದ್ರಗ್ರಹದ ಬಗ್ಗೆಯೂ ಅಧ್ಯಯನ ಮಾಡುವಷ್ಟರ ಮಟ್ಟಿಗೆ ಯಶಸ್ವಿಯಾಗಿದೆ. ಇದಕ್ಕೆ ಸಾಕಷ್ಟು ಮಂದಿ ವಿಜ್ಞಾನಿಗಳ ಕಠಿಣ ಪರಿಶ್ರಮ ಕಾರಣವಾದರೂ ಅದರ ಹಿಂದಿನ ರೂವಾರಿಗಳು ಶಿಕ್ಷಕರೇ ಆಗಿದ್ದಾರೆ. ಚಂದ್ರಯಾನಕ್ಕೆ ಉಪಗ್ರಹ ಕಳುಹಿಸುವ ವಿಜ್ಞಾನಿಗಳನ್ನು ರೂಪಿಸಿದ್ದು ನಿಮ್ಮಂತಹ ಶಿಕ್ಷಕರೇ ಎಂಬುದು ಹೆಮ್ಮೆಪಡುವಂತಹ ವಿಷಯವಾಗಿದೆ ಎಂದ ಅವರು, ಓರ್ವ ಶಿಕ್ಷಕ ಎಂತಹ ಅಸಾಮಾನ್ಯವಾದುದನ್ನು ಸಾಧಿಸಬಲ್ಲ ಎಂಬುದಕ್ಕೆ ಶಿಕ್ಷಕ ವೃತ್ತಿಯಿಂದ ರಾಷ್ಟ್ರಪತಿ ಹುದ್ದೆಗೇರಿದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರೇ ಸಾಕ್ಷಿ. ಭಾರತ ದೇಶಕ್ಕೆ ಹಾಗೂ ಕ್ಷಣ ವ್ಯವಸ್ಥೆಗೆ ರಾಧಾಕೃಷ್ಣನ್ ಅವರ ಕೊಡುಗೆ ಅಪಾರವಾದುದು ಎಂದು ಶ್ಲಾಘಿಸಿದರು.
ಪ್ರಧಾನಮಂತ್ರಿ, ರಾಷ್ಟ್ರಪತಿ, ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಐಎಎಸ್, ಐಪಿಎಸ್ ಅಧಿಕಾರಿಗಳ ದಿನಾಚರಣೆ ಆಚರಿಸುವುದಿಲ್ಲ. ಆದರೆ ಶಿಕ್ಷಕರ ದಿನಾಚರಣೆಯನ್ನು ಇಡೀ ದೇಶ ಆಚರಿಸುತ್ತದೆ. ಕಾರಣ ಶಿಕ್ಷಕ ವೃತ್ತಿ ಪವಿತ್ರವಾದುದು. ಎಲ್ಲಾ ಕ್ಷೇತ್ರದಲ್ಲಿ ಜಾತಿ ರಾಜಕಾರಣವಿರಬಹುದು ಆದರೆ ಶಿಕ್ಷಕ ಯಾವುದೇ ಜಾತಿ ರಾಜಕಾರಣ ಮಾಡುವುದಿಲ್ಲ. ನನ್ನ ವಿದ್ಯಾರ್ಥಿ, ನನ್ನ ಶಿಷ್ಯ ಎಂಬ ಭಾವನೆಯಲ್ಲಿ ಎಲ್ಲಾ ಜಾತಿ, ಧರ್ಮದವರ ಮಕ್ಕಳಿಗೂ ಉತ್ತಮವಾದ ಶಿಕ್ಷಣವನ್ನು ಭೋದಿಸುವ ಕೆಲಸವನ್ನು ನಿರ್ವಹಿಸುತ್ತಾರೆ, ಈ ಕಾರಣದಿಂದಲೇ ಶಿಕ್ಷಕರ ದಿನಾಚರಣೆಯನ್ನು ನಾವೆಲ್ಲರೂ ಆಚರಿಸುತ್ತಿದ್ದೇವೆ ಎಂದ ಅವರು, ಇತ್ತೀಚಿನ ದಿನಗಳಲ್ಲಿ ಕೆಲವರಿಂದಾಗಿ ಶಿಕ್ಷಕರನ್ನು ಅನುಮಾನದಿಂದ ನೋಡಲಾಗುತ್ತಿದೆ, ಆದರೆ ತಾಲ್ಲೂಕಿನಲ್ಲಿ ಅಂತಹ ಶಿಕ್ಷಕರಿಲ್ಲ, ಉತ್ತಮ ಶಿಕ್ಷಕರು ನನ್ನ ಕ್ಷೇತ್ರದಲ್ಲಿದ್ದಾರೆ, ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ, ಅವರೆಲ್ಲರಿಗೂ ಒಳ್ಳೆಯದಾಗಲಿ ಎಂದರು.
ಮಾದಿಹಳ್ಳಿ ರಾಮಕೃಷ್ಣ ಮಠದ ಶ್ರೀ ಹೃದಯಾನಂದಜೀ, ತುರುವೇಕೆರೆ ವಿರಕ್ತಮಠದ ಶ್ರೀ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿಗಳು ದಿವ್ಯ ಸಾನಿದ್ಯ ವಹಿಸಿದ್ದರು. ಸಮಾರಂಭದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಿವೃತ್ತ ಶಿಕ್ಷಕ ಮಂಜಯ್ಯಗೌಡ ಉಪನ್ಯಾಸ ನೀಡಿದರು.
ರಾಜ್ಯ ಜೆಡಿಎಸ್ ಯುವ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್, ತಹಸೀಲ್ದಾರ್ ರೇಣುಕುಮಾರ್, ಪಪಂ ಸದಸ್ಯರಾದ ಸುರೇಶ್, ಚಿದಾನಂದ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಂ.ರಾಜು, ಬಿಇಒ ಸೋಮಶೇಖರ್, ಇಒ ಶಿವರಾಜಯ್ಯ, ಪ್ರಭಾರ ಕ್ಷೇತ್ರ ಸಮನ್ವಯಾಧಿಕಾರಿ ವೀಣಾ, ಪ್ರಭಾರ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರವಿಕುಮಾರ್, ಪ್ರಭಾರ ದೈಹಿಕ ಶಿಕ್ಷಣಾಧಿಕಾರಿ ಷಣ್ಮುಖ, ಕಸಾಪ ಅಧ್ಯಕ್ಷ ಡಿ.ಪಿ.ರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಷಣ್ಮುಖಪ್ಪ, ತಾಲ್ಲೂಕು ಅಧ್ಯಕ್ಷ ಎಂ.ಬಸವರಾಜು, ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ರಾಜಪ್ಪ ಸೇರಿದಂತೆ ವಿವಿಧ ಶಿಕ್ಷಕರ ಸಂಘದ ಪದಾಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ