ಚೆನ್ನೈ, ಅಕ್ಟೋಬರ್ 09; ಭಾರತೀಯ ರೈಲ್ವೆಯ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್ಪ್ರೆಸ್ಗೆ ಭಾರೀ ಬೇಡಿಕೆ ಇದೆ. ವಂದೇ ಭಾರತ್ ಮಾದರಿಯ ಹವಾನಿಯಂತ್ರಣ ರಹಿತ ರೈಲನ್ನು ತಯಾರು ಮಾಡಲಾಗಿದೆ. ಈ ತಿಂಗಳ ಅಂತ್ಯದಲ್ಲಿ ಈ ರೈಲುಗಳು ಸಂಚಾರ ಆರಂಭಿಸುವ ನಿರೀಕ್ಷೆ ಇದೆ. ರೈಲ್ವೆ ಸಚಿವಾಲಯ ಅಧೀನದ ಚೆನ್ನೈ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ವಂದೇ ಭಾರತ್ ರೈಲುಗಳ ಬೋಗಿಯನ್ನು ತಯಾರು ಮಾಡಲಾಗುತ್ತದೆ. ಇಲ್ಲಿಯೇ ವಂದೇ ಭಾರತ್ ಮಾದರಿ ನಾನ್ ಎಸಿ ಸ್ಲೀಪರ್ ಬೋಗಿಯನ್ನು ತಯಾರು ಮಾಡಲಾಗಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ ಈ ಮಾದರಿಯ ಬೋಗಿಗಳ ಕೊನೆಯ ಹಂತದ ಕೆಲಸಗಳು ನಡೆಯುತ್ತಿವೆ. ಬೂದು ಮತ್ತು ಕೇಸರಿ ಬಣ್ಣದ ನಾನ್ ಎಸಿ ಸ್ಲೀಪರ್ 22 ಕೋಚ್ಗಳ ರೈಲುಗಳು ಈ ತಿಂಗಳ ಅಂತ್ಯಕ್ಕೆ ಸಂಚಾರ ಆರಂಭಿಸುವ ಸಾಧ್ಯತೆ ಇದೆ. ಈ ರೈಲಿನ ವಿಶೇಷತೆಗಳು ಭಾರತೀಯ ರೈಲ್ವೆ ಇಲಾಖೆ ಈಗಾಗಲೇ ವಂದೇ ಭಾರತ್ ಸ್ಲೀಪರ್ ಕೋಚ್ ಮಾದರಿ ರೈಲುಗಳು ಹೇಗಿರುತ್ತವೆ ಎಂದು ಚಿತ್ರಗಳನ್ನು ಬಿಡುಗಡೆ ಮಾಡಿದೆ. ಇದು ವಂದೇ ಭಾರತ್ ಮಾದರಿಯ ನಾನ್ ಎಸಿ ಸ್ಲೀಪರ್ ಕೋಚ್ ಪುಶ್-ಪುಲ್ ರೈಲುಗಳಾಗಿವೆ.
ಚಿತ್ತರಂಜನ್ ಲೋಕೋಮೊಟಿವ್ ವರ್ಕ್ನಲ್ಲಿ ಇದರ ಎಂಜಿನ್ ತಯಾರು ಮಾಡಲಾಗಿದೆ. ರೈಲಿನ ಮುಂದೆ ಮತ್ತು ಹಿಂದೆ ಎಂಜಿನ್ ಇರುತ್ತದೆ. ಇದನ್ನು ವಂದೇ ಭಾರತ್ ಮಾದರಿ ರೈಲು ಎಂದು ಕರೆಯದೇ ತ್ರಿ ಟ್ರೈರ್ ಎಸಿ ಅಭಿವೃದ್ಧಿಗೊಳಿಸಿದ ರೈಲು ಎಂದು ಕರೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚೆನ್ನೈನಲ್ಲಿ ಈ ಮಾದರಿ ರೈಲಿನ ಅಂತಿಮ ಹಂತದ ಕೆಲಸಗಳು ನಡೆಯುತ್ತಿವೆ. ವಿನ್ಯಾಸ ಸಂಶೋಧನೆ ಹಾಗೂ ಪ್ರಮಾಣ ಸಂಸ್ಥೆ (ಆರ್ಡಿಎಸ್ಓ) ಒಪ್ಪಿಗೆ ನೀಡಿದ ಬಳಿಕ ರೈಲ್ವೆ ಸಚಿವಾಲಯ ಯಾವ ಮಾರ್ಗದಲ್ಲಿ ಈ ರೈಲು ಪರಿಚಯಿಸಬೇಕು? ಎಂದು ತೀರ್ಮಾನ ಮಾಡಲಿದೆ.
ಈ ಸ್ಲೀಪರ್ ರೈಲು ಬೋಗಿಗಳನ್ನು Semi-Permanent Couplers (SMC) ಎಂಬ ತಂತ್ರಜ್ಞಾನ ಬಳಕೆ ಮಾಡಿ ತಯಾರು ಮಾಡಲಿದೆ. ಸಾಮಾನ್ಯ ಸ್ಲೀಪರ್ ಕೋಚ್ ರೈಲು ಬೋಗಿಗಿಂತ ಆರಾಮದಾಯಕ ಅನುಭವವನ್ನು ಇದು ನೀಡುತ್ತದೆ. ಈ ತಂತ್ರಜ್ಞಾನವನ್ನು ದೇಶಿಯವಾಗಿಯೇ ತಯಾರು ಮಾಡಲಾಗಿದೆ.