ಸಿರುಗುಪ್ಪ : ನಗರದ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಕುಡುದರಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗಲಾಪುರ ಗ್ರಾಮದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡದೇ ಗ್ರಾಮಸಭೆ ನಡೆಸಿರುವ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸುವಂತೆ ಕುಡುದರಾಳ್ ಗ್ರಾಮಸ್ಥರಿಂದ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕರಿಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪವನ್ಕುಮಾರ್ ದಂಡಪ್ಪನವರ್ ಅವರ ಮೂಲಕ ಮನವಿ ಸಲ್ಲಿಸಿದರು.
ತಾಲೂಕು ಪಂಚಾಯಿತಿಯ ಮಾಜಿ ನಾಮನಿರ್ದೇಶಿತ ಸದಸ್ಯ ಖಾಸಿಂಸಾಬ್ ಮಾತನಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮಸಭೆ ನಡೆಸುವ ಕುರಿತು ಡಂಗೂರ ಸಾರಿ ಸಾರ್ವಜನಿಕರಿಗೆ ಮಾಹಿತಿ ನೀಡದೇ ನಿಯಮಗಳನ್ನು ಗಾಳಿಗೆ ತೂರಿ ಗ್ರಾಮಸಭೆಯನ್ನು ನಡೆಸಿದ್ದಾರೆಂದು ಆರೋಪಿಸಿದರು.
ಅಲ್ಲದೇ ಕುಡುದರಾಳ್ ಗ್ರಾಮದಲ್ಲಿ ಮನೆಗಳಿಗಾಗಿ ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳ ಅರ್ಜಿಯನ್ನು ಬುಟ್ಟಿಗೆ ಎಸೆದಿದ್ದಾರೆ.
ಈಗಾಗಲೇ ಶ್ರೀಧರಗಡ್ಡೆ ನವಗ್ರಾಮದಲ್ಲಿ ಅನರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಿದ್ದು ಅವುಗಳನ್ನು ರದ್ದುಪಡಿಸಿ ಅರ್ಹ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಇ.ಓ ಪವನ್ಕುಮಾರ್ ದಂಡಪ್ಪನವರ್ ಮಾತನಾಡಿ ಸಂಬ0ದಿಸಿದ ದೂರನ್ನು ಪರಿಶೀಲನೆ ನಡೆಸಿ ಅಗತ್ಯ ಕ್ರಮಕೈಗೊಳ್ಳಲಾಗುವುದೆಂದು ತಿಳಿಸಿದರು.
ಇದೇ ವೇಳೆ ಗ್ರಾಮಸ್ಥರಾದ ಹೆಚ್.ಕೆ.ನಾಗರಾಜ, ಸಣ್ಣ ಖಾಸಿಂಸಾಬ್, ಈರಣ್ಣ, ಮೂಕಪ್ಪ, ಹುಸೇನಿ, ಖಾದರಲಿಂಗ, ಕನಕೇಶ, ಶಿವರಾಜ್, ಖಾದರಬಾಷ ಇನ್ನಿತರರು ಇದ್ದರು.
ವರದಿ. ಶ್ರೀನಿವಾಸ ನಾಯ್ಕ