Join The Telegram | Join The WhatsApp |
ಬೆಳಗಾವಿ:- ಶುಕ್ರವಾರ ನಗರದ ಮಾನವ ಬಂಧುತ್ವ ವೇದಿಕೆಯ ಕಚೇರಿಯಲ್ಲಿ ಸ್ವಾಮಿ ವಿವೇಕಾನಂದರ 161ನೇ ಜಯಂತಿಯನ್ನು ಬಂಡಾಯ ಸಾಹಿತ್ಯ ಸಂಘಟ ಬೆನೆ ಬೆಳಗಾವಿ ವತಿಯಿಂದ ಆಚರಿಸಲಾಯಿತ್ತು.
“ವೇದಾಂತದ ಮೆದುಳು, ಇಸ್ಲಾಮಿನ ದೇಹ ನಮ್ಮ ಭಾರತ ದೇಶದ ಭದ್ರತೆ ಮತ್ತು ಅಭಿವೃದ್ಧಿಗೆ ಅತ್ಯಾವಶ್ಯಕವಾಗಿದೆ ಎಂದು ಹೇಳಿದ ಸ್ವಾಮಿ ವಿವೇಕಾನಂದರ ಚಿಂತನೆಗಳು ನಮ್ಮ ದೇಶಕ್ಕೆ ಅದರಲ್ಲೂ ಪ್ರಮುಖವಾಗಿ ಯುವ ಜನಾಂಗಕ್ಕೆ ಬೇಕಿದೆ.
ಹೀಗಾಗಿ ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿಯಲ್ಲಿ ದಾಖಲಾಗಿರುವ ಮೂಲ ಹಾಗೂ ಅಧಿಕೃತ ಚಿಂತನೆಗಳನ್ನು ಮುಟ್ಟಿಸುವ ಕಾರ್ಯ ಪ್ರಜ್ಞಾವಂತ ಭಾರತೀಯರ ಮೇಲಿದೆ” ಎಂದು ಹಿರಿಯ ಬಂಡಾಯ ಸಾಹಿತಿ ಡಾ. ವೈ. ಬಿ. ಹಿಮ್ಮಡಿ ಅಭಿಪ್ರಾಯ ಪಟ್ಟರು.
ಬಂಡಾಯ ಸಾಹಿತ್ಯ ಸಂಘಟನೆಯ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಳ್ಳಲಾದ ‘ಸ್ವಾಮಿ ವಿವೇಕಾನಂದರ ಜನ್ಮ ದಿನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ” ಧಾರ್ಮಿಕ ಮೂಲಭೂತ ವಾದಗಳಿಂದ ನಲುಗಿ ಹೋಗಿರುವ ನಮ್ಮ ದೇಶದಲ್ಲಿ ಎಲ್ಲ ಧರ್ಮಗಳನ್ನು ಮೀರಿದ ಮಾನವೀಯತೆಯನ್ನು ಉಳಿಸಿ ಬೆಳೆಸಿಕೊಳ್ಳುವಂತಾಗಬೇಕು. ಹಾಗಾದಾಗ ಮಾತ್ರ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ಯುವ ದಿನಾಚರಣೆಗೆ ಅರ್ಥ ಬರುತ್ತದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸ್ವಾಮಿ ವಿವೇಕಾನಂದರ ಜೀವನ ಸಂದೇಶ’ ಕುರಿತು ಉಪನ್ಯಾಸ ನೀಡಿದ ಬೆಳಗಾವಿ ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಭಜಂತ್ರಿ ಅವರು, ” ಸನ್ಯಾಸತ್ವಕ್ಕೆ ಹೊಸ ವ್ಯಾಖ್ಯಾನ ಬರೆದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು.
ಯುವಶಕ್ತಿಯ ಮೇಲೆ ಅಗಾಧ ಪ್ರೇಮ ಮತ್ತು ಭರವಸೆ ಇಟ್ಟ ಅವರು ರಾಷ್ಟ್ರ ಪ್ರಜ್ಞೆ ಜಾಗೃತವಾಗಬೇಕಾದರೆ ಮೊದಲು ಯುವಕರಲ್ಲಿ ಜಾಗೃತಿ ಹಾಗೂ ಹೊಸ ಚಿಂತನೆ ನೆಲೆಯೂರಬೇಕು. ಆ ನಿಟ್ಟಿನಲ್ಲಿ ತಮ್ಮ ಇಡೀ ಜೀವನವನ್ನು ಮುಡುಪಾಗಿಟ್ಟು ಭಾರತದ ಮೂಲ ಚಿಂತನೆಗಳನ್ನು ವಿಶ್ವಕ್ಕೆ ಪರಿಚಯಿಸಿದ ವಿವೇಕಾನಂದರು ನಮಗೆ ಆದರ್ಶವಾಗಬೇಕಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಹುಲ ಮೇತ್ರಿ ಅಭಿನಂದನಾ ಸಮಿತಿ ವತಿಯಿಂದ ಹಿರಿಯ ಕನ್ನಡ ಹೋರಾಟಗಾರರಾದ ಅಶೋಕ ಚಂದರಗಿ ಅವರನ್ನು ಸತ್ಕರಿಸಲಾಯಿತು, ಸತ್ಕಾರಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಚಂದರಗಿ ಅವರು,” ತೊಂಭತ್ತರ ದಶಕದಲ್ಲಿ ಕನ್ನಡ ಶಾಲೆಗಳ ಅಭಿವೃದ್ಧಿಗಾಗಿ ನಡೆದ ಹೋರಾಟಗಳಿಗೆ ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೇತ್ರಿ ಅವರು ಬೆಂಬಲವಾಗಿ ನಿಲ್ಲುತ್ತಿದ್ದ ಅನೇಕ ಘಟನೆಗಳನ್ನು ಮೆಲುಕು ಹಾಕಿದ ಅವರು ನಿವೃತ್ತಿ ನಂತರದ ದಿನಗಳಲ್ಲಿ ಎಲ್ಲ ಪ್ರಗತಿಪರ ಹೋರಾಟಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಭಾಗವಹಿಸುತ್ತಾರೆಂಬ ಆಶಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ರಾಹುಲ ಮೇತ್ರಿ ಅವರ ಅಭಿನಂದನಾ ಗ್ರಂಥ ‘ಮೈತ್ರಿ’ ಕೃತಿಯನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಆರ್. ಪಿ. ಡಿ. ಕಾಲೇಜಿನ ಪ್ರಾಧ್ಯಾಪಕರಾದ ಡಾ. ಹೆಚ್. ಬಿ. ಕೋಲ್ಕಾರ, ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ಮಹಾಂತೇಶ ಛಲವಾದಿ, ಡಾ. ಸಾವುಕಾರ ಕಾಂಬಳೆ, ಡಾ. ಅಡಿವೆಪ್ಪ ಇಟಗಿ, ದಲಿತ ವಿದ್ಯಾರ್ಥಿ ಪರಿಷತ್ತಿನ ಅಜಿತ ಮಾದರ, ಆಕಾಶ ಬೇವಿನಕಟ್ಟಿ, ಗಜಾನನ ಸಂಗೋಟಿ, ಶಂಕರ ದಂಡಿನ, ಯುವ ಸಾಹಿತಿ ಸಿದ್ದರಾಮ ತಳವಾರ, ಪ್ರಕಾಶ ಬೊಮ್ಮನವರ, ವಿವೇಕಾನಂದ ಕರ್ಪೆ, ಸುನಿಲ ಲಮಾಣಿ, ವಿವೇಕ ಭಸ್ಮೇ, ರಮೇಶ ಭಜಂತ್ರಿ, ಮಹೇಶ ಹೊಸೂರ, ಸುನಿಲ ನಾಯಕ, ವಿಕಾಸ,ಅವಿನಾಶ, ರಕ್ಷಿತ ಮುಂತಾದವರು ಪಾಲ್ಗೊಂಡಿದ್ದರು.
ಬಾಳಕೃಷ್ಣ ನಾಯಕ ಸ್ವಾಗತಿಸಿದರು.ಶಂಕರ ಬಾಗೇವಾಡಿ ಪ್ರಾಸ್ತವಿಕ ನುಡಿಯನ್ನಾಡಿದರು.
ಯುವಕವಿ ನದಿಮ ಸನದಿ ಕಾರ್ಯಕ್ರಮ ನಿರ್ವಹಿಸಿದರು.
ಪ್ರೊ. ಸಂತೋಷ ನಾಯಕ ವಂದಿಸಿದರು.
ವರದಿ ಪ್ರಕಾಶ ಕುರಗುಂದ..
Join The Telegram | Join The WhatsApp |