ಮುಂಬೈ: ಬಾಲಿವುಡ್ ನಟ ವಿಕ್ರಾಂತ್ ಮಾಸ್ಸೆ ಅಭಿನಯದ ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾವನ್ನು ಪ್ರಧಾನಿ ನರೇಂದ್ರ ಮೋದಿ ವೀಕ್ಷಿಸಿದ್ದಾರೆ. ನಿನ್ನೆ ಸಂಜೆ ಸಂಸತ್ ಭವನದ ಬಾಲಯೋಗಿ ಸಭಾಂಗಣದಲ್ಲಿ ಅವರು ಸಿನಿಮಾ ನೋಡಿದರು.
ಮೋದಿ ಜೊತೆ ಅನೇಕ ಸಚಿವರು, ಸಂಸದರು ಹಾಗೂ ಚಿತ್ರತಂಡದವರು ಕೂಡ ಭಾಗಿ ಆಗಿದ್ದರು.ಸಿನಿಮಾ ವೀಕ್ಷಿಸಿದ ನಂತರ ಸೋಶಿಯಲ್ ಮೀಡಿಯಾದಲ್ಲಿ ನರೇಂದ್ರ ಮೋದಿ ಅವರು ‘ದಿ ಸಾಬರಮತಿ ರಿಪೋರ್ಟ್’ ಚಿತ್ರತಂಡಕ್ಕೆ ಶಹಬ್ಬಾಸ್ ಎಂದಿದ್ದಾರೆ.
ನರೇಂದ್ರ ಮೋದಿ ಅವರು ಸಿನಿಮಾ ವೀಕ್ಷಿಸಿದ ನಂತರ ಕೆಲವು ಫೋಟೋಗಳನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ಎನ್ಡಿಎ ಸಂಸದರ ಜೊತೆಗೂಡಿ ದಿ ಸಾಬರಮತಿ ರಿಪೋರ್ಟ್ ಸಿನಿಮಾ ನೋಡಿದೆ. ಚಿತ್ರತಂಡದ ಪ್ರಯತ್ನವನ್ನು ಈ ಸಂದರ್ಭದಲ್ಲಿ ನಾನು ಶ್ಲಾಘಿಸುತ್ತೇನೆ ಎಂದು ಮೋದಿ ಪೋಸ್ಟ್ ಮಾಡಿದ್ದಾರೆ.
ನರೇಂದ್ರ ಮೋದಿ ಜೊತೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಚಿವ ಜೆಪಿ ನಡ್ಡಾ ಕೂಡ ಸಿನಿಮಾ ವೀಕ್ಷಿಸಿದರು. ಚಿತ್ರತಂಡದವರಾದ ವಿಕ್ರಾಂತ್ ಮಾಸಿ, ಏಕ್ತಾ ಕಪೂರ್, ರಿದ್ಧಿ ಡೋಗ್ರ, ನಿರ್ದೇಶಕ ಧೀರಜ್ ಮುಂತಾದವರು ಸಹ ಮೋದಿ ಜೊತೆ ಕುಳಿತು ಸಿನಿಮಾ ನೋಡಿದರು.
ಬಳಿಕ ಮಾತನಾಡಿದ ವಿಕ್ರಾಂತ್ ಮಾಸ್ಸೆ, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ , ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಎಲ್ಲ ಸಚಿವರೊಂದಿಗೆ ಸಿನಿಮಾ ನೋಡಿದ್ದು ವಿಭಿನ್ನ ಅನುಭವ. ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಾಗುತ್ತಿಲ್ಲ ಏಕೆಂದರೆ ಬೇರೆಯದೇ ಆತಂಕ ಮತ್ತು ಸಂತೋಷವಿದೆ. ಅವರೆಲ್ಲರೊಂದಿಗೆ ಈ ಸಿನಿಮಾ ನೋಡುವ ಅವಕಾಶ ಸಿಕ್ಕಿದ್ದು ನನ್ನ ವೃತ್ತಿ ಜೀವನದ ಅತ್ಯುತ್ತಮ ಕ್ಷಣ ಎಂದಿದ್ದಾರೆ.