ನವದೆಹಲಿ: ದೇಶದೆಲ್ಲೆಡೆ ಈಗ ‘ಇಂಡಿಯಾ’ ಹಾಗೂ ‘ಭಾರತ’ ಎಂಬ ಪದಗಳದ್ದೇ ಚರ್ಚೆ ನಡೆಯುತ್ತಿದೆ. ಇತ್ತೀಚೆಗೆ ರಾಷ್ಟ್ರಪತಿ ಭವನದಿಂದ ಸೆಪ್ಟೆಂಬರ್ 9ರ G20 ಔತಣಕೂಟಕ್ಕೆ ಪ್ರತಿಪಕ್ಷಗಳಿಗೆ ಆಹ್ವಾನ ನೀಡಿದ್ದು, ಅದರಲ್ಲಿ ʼPresident of India’ ಬದಲಿಗೆ ʼPresident of Bharatʼ ಎಂದು ಉಲ್ಲೇಖಿಸಿದ ಬಳಿಕವಂತೂ, ಕೇಂದ್ರ ಸರ್ಕಾರವು ಇಂಡಿಯಾ ಎಂಬ ಹೆಸರನ್ನು ಭಾರತ ಎಂಬುದಾಗಿ ಬದಲಿಸುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ.
ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇದರ ಬೆನ್ನಲ್ಲೇ, ಭಾರತ ಎಂಬ ಪದ ಹೇಗೆ ಸೇರಿಸಲಾಯಿತು, ಭಾರತ ಎಂಬ ಪದದ ಪರ ಡಾ.ಬಿ.ಆರ್.ಅಂಬೇಡ್ಕರ್ ಅವರ ಅಭಿಪ್ರಾಯ ಏನಾಗಿತ್ತು ಎಂಬ ಚರ್ಚೆಯೂ ಗಮನ ಸೆಳೆದಿದೆ.
ಹಾಗೆ ನೋಡಿದರೆ, ಭಾರತ ಎಂಬ ಪದವನ್ನು ದೇಶದ ಸಂವಿಧಾನದಲ್ಲಿ ಸೇರಿಸಲು ಸಂವಿಧಾನ ರಚನಾ ಸಮಿತಿಯಲ್ಲಿದ್ದ ಹೆಚ್ಚಿನ ಜನರಿಗೆ ಇಷ್ಟವಿರಲಿಲ್ಲ. ಆದರೆ, 1949ರ ಸೆಪ್ಟೆಂಬರ್ 17ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತ ಎಂಬ ಪದದ ಅಳವಡಿಕೆಯ ಪರ ನಿಂತರು. ಸಂವಿಧಾನದ 1ನೇ ವಿಧಿಯಲ್ಲಿ ಭಾರತ ಎಂಬ ಹೆಸರು ಸೇರಿಸಬೇಕು ಎಂದು ಪ್ರಸ್ತಾಪಿಸಿದರು. ಇದಾದ ಬಳಿಕವೇ “ಇಂಡಿಯಾ, ಇದು ಭಾರತ, ರಾಜ್ಯಗಳ ಒಕ್ಕೂಟವಾಗಿದೆ” ಎಂಬ ಸಾಲು ಸೇರಿಸಲಾಯಿತು ಎಂದು ಪುಸ್ತಕಗಳ ಉಲ್ಲೇಖದಿಂದ ತಿಳಿದುಬಂದಿದೆ.