Join The Telegram | Join The WhatsApp |
ವಿಶ್ವದ ಅತ್ಯಂತ ಹಿರಿಯ ಮಹಿಳೆ, ಕೊಕು ಇಸ್ತಾಂಬುಲೋವಾ ತಮ್ಮ 129ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ರಷ್ಯಾದ ಚೆಚೆನ್ಯಾ ಗ್ರಾಮದ ನಿವಾಸಿಯಾಗಿರುವ ಅವರು ಮನೆಯಲ್ಲಿಯೇ ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಆದರೆ ಈ ವೃದ್ಧೆಯು ತನ್ನ ಜೀವಮಾನದಲ್ಲಿ ನಾನು ಒಂದು ದಿನವೂ ಸಂತೋಷವಾಗಿರಲಿಲ್ಲ ಎಂದು ಹೇಳಿಕೊಂಡಿದ್ದರು ಎನ್ನಲಾಗಿದೆ.
ಕೊಕು ಇಸ್ತಾಂಬುಲೋವಾ ಮೊಮ್ಮಗ ಇಲ್ಯಾಸ್ ಅಬುಬರಕೋವ್ ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದು ಅವರು ಸಾಯುವ ದಿನವೂ ಚೆನ್ನಾಗಿಯೇ ಇದ್ದರು ಎಂದು ಹೇಳಿದ್ದಾರೆ. ಅಜ್ಜಿ ನಮ್ಮ ಜೊತೆ ತಮಾಷೆ ಮಾಡಿಕೊಂಡು ಮಾತನಾಡುತ್ತಿದ್ದರು.
ಇದ್ದಕ್ಕಿದ್ದಂತೆಯೇ ಅಸ್ವಸ್ಥರಾದರು. ಎದೆನೋವು ಬರ್ತಿದೆ ಎಂದು ಹೇಳಿಕೊಂಡರು. ಕೂಡಲೇ ನಾವು ವೈದ್ಯರನ್ನು ಕರೆಸಿದ್ದೆವು. ಆಗ ಅಜ್ಜಿಗೆ ರಕ್ತದೊತ್ತಡ ಕಡಿಮೆಯಾಗಿದೆ ಎಂಬ ವಿಚಾರ ನಮಗೆ ತಿಳಿಯಿತು. ಆದರೆ ಆಕೆಯನ್ನು ಉಳಿಸಿಕೊಳ್ಳಲು ನಮ್ಮಿಂದ ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ಕೊಕು ಅಂತ್ಯಕ್ರಿಯೆಯನ್ನು ಅವರ ಸ್ವಗ್ರಾಮ ಬ್ರಾಟ್ಸ್ಕೊಯ್ನಲ್ಲಿ ನೆರವೇರಿಸಲಾಗಿದೆ. ಕೊಕು ತಮ್ಮ ಐವರು ಮೊಮ್ಮಕ್ಕಳು ಹಾಗೂ 16 ಮರಿ ಮೊಮ್ಮಕ್ಕಳನ್ನು ಅಗಲಿದ್ದಾರೆ. ತ್ಸಾರ್ ನಿಕೋಲಸ್ 2 ಅಧಿಕಾರಕ್ಕೆ ಬರುವ ಮುನ್ನವೇ ಕೋಕು ಜನಿಸಿದ್ದರು ಎನ್ನಲಾಗಿದೆ.
ಇಡೀ ಸೋವಿಯತ್ ಒಕ್ಕೂಟಕ್ಕೆ ಈಕೆ ಹಿರಿಯವಳು ಎನ್ನಲಾಗಿದೆ. ಕೊಕು ಧರ್ಮದಲ್ಲಿ ಮುಸ್ಲಿಂ ಎಂದು ತಿಳಿದು ಬಂದಿದೆ. ಕಳೆದ ವರ್ಷ ಪ್ರಸಾರವಾದ ಕಾರ್ಯಕ್ರಮದಲ್ಲಿ ಕೊಕು ಇಸ್ತಾಂಬುಲೋವಾಗೆ ತನ್ನ ಕುಟುಂಬಸ್ಥರನ್ನು ಸ್ಟಾಲಿನ್ ಕಜಕಿಸ್ತಾನಕ್ಕೆ ಗಡಿಪಾರು ಮಾಡಿದ ಸಂದರ್ಭದಲ್ಲಿ ತಾವು ಪಟ್ಟ ಕಷ್ಟಗಳ ಬಗ್ಗೆ ಮಾತನಾಡಿದ್ದರು.
1944ರ ಫೆಬ್ರವರಿ ಬೆಳಗ್ಗೆ ತನ್ನ ಜನರನ್ನು ಗಡಿಪಾರು ಮಾಡಿದ ಬಗ್ಗೆ ಮಾತನಾಡಿದ್ದ ಕೊಕು, ನಮ್ಮನ್ನು ರೈಲಿನಲ್ಲಿ ತುಂಬಲಾಗಿತ್ತು. ಏನಾಗ್ತಿದೆ ಎನ್ನುವುದು ನಮಗೆ ಗೊತ್ತಿರಲಿಲ್ಲ. ರೈಲ್ವೆ ಗಾಡಿಗಳು ಜನರಿಂದ ತುಂಬಿದ್ದವು. ಎಲ್ಲಿ ನೋಡಿದರೂ ಕೊಳಕು, ಕಸ, ಮಲ ವಿಸರ್ಜನೆಯೇ ಇತ್ತು ಎಂದು ಹೇಳಿದ್ದಾರೆ.
Join The Telegram | Join The WhatsApp |