ತುರುವೇಕೆರೆ: –ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಲ್ಲಿ ಮುಳುಗಿದ್ದು, ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ಕಡೆಗಣಿಸಿದೆ ಎಂದು ವಿಧಾನಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಕಿಡಿಕಾರಿದರು.
ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರಿಗೆ ಈಗ ಶಾಲೆಗಳ ಬಗ್ಗೆ ಪ್ರೀತಿ ಉಕ್ಕಿ ಹರಿಯುತ್ತಿದೆ. ಅದಕ್ಕೆ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್, ನೀರು ನೀಡುವುದಾಗಿ ಹೇಳಿದ್ದಾರೆ. ಈ ಹಿಂದೆ 2013 ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರಿ ಶಾಲೆಗಳನ್ನು ಮರೆತಿದ್ದರು. ಗ್ಯಾರಂಟಿ ಯೋಜನೆಗಳಿಗಾಗಿ 50ಸಾವಿರ ಕೋಟಿಯನ್ನು ಸರ್ಕಾರ ವ್ಯಯಿಸುತ್ತಿದೆ.
ಗ್ಯಾರಂಟಿ ಯೋಜನೆಯನ್ನು ಕನಿಷ್ಠ ಒಂದು ವರ್ಷ ನಿಲ್ಲಿಸಿ ಅದೇ ಅನುದಾನವನ್ನು ತಲಾ 1 ಕೋಟಿಯಂತೆ ಸರ್ಕಾರಿ ಶಾಲೆಗಳಿಗೆ ನೀಡಿದರೆ ರಾಜ್ಯದ ಎಲ್ಲಾ ಶಾಲೆಗಳೂ ಅಭಿವೃದ್ಧಿಯಾಗುತ್ತವೆ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಸೌಕರ್ಯಯುತ ಶಾಲೆ ದೊರೆಯುತ್ತದೆ ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಎನ್.ಪಿ.ಎಸ್. ತೆಗೆದು ಒಪಿಎಸ್ ಜಾರಿಗೊಳಿಸುವ ಭರವಸೆ ನೀಡಿತ್ತು, ಕಾಂಗ್ರೆಸ್ ನ ಭರವಸೆಯನ್ನು ನಂಬಿ ನೌಕರರು ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿದ್ದರು. ಆದರೆ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಆರೋಪಿಸಿ, ಚುನಾವಣಾ ಪ್ರಣಾಳಿಕೆಯಂತೆ ಸರ್ಕಾರ ಭರವಸೆ ಈಡೇರಿಸಬೇಕು. ನೌಕರರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದ ಅವರು, ಎನ್ .ಪಿ.ಎಸ್. ತೆಗೆದು ಓಪಿಎಸ್ ಜಾರಿ ಮಾಡುವ ಬಗ್ಗೆ ಲೋಕಸಭಾ ಚುನಾವಣಾ ವೇಳೆ ಪ್ರಣಾಳಿಕೆಯಲ್ಲಿ ಸೇರಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ನಮ್ಮ ಸರ್ಕಾರ ಏಳನೇ ವೇತನ ಆಯೋಗವನ್ನು ರಚನೆ ಮಾಡಿತ್ತು.ಈ ವರದಿಯನ್ನು ಶೀಘ್ರ ಜಾರಿಗೊಳಿಸಬೇಕು ಮತ್ತು ಶಿಕ್ಷಕರ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕಿದೆ. ಪಿಂಚಣಿ ವಂಚಿತರಿಗೆ ಪಿಂಚಣಿ ನೀಡಬೇಕು ಎಂದು ನಮ್ಮ ಸರ್ಕಾರದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಈ ವರದಿಯನ್ನು ಸರ್ಕಾರ ತರಿಸಿಕೊಳ್ಳಬೇಕು. ಯಾವುದೇ ಶಿಕ್ಷಕರು ಪಿಂಚಣಿ ವಂಚಿತರಾಗಬಾರದೆಂದರು.
ವರ್ಷದಲ್ಲಿ ಮೂರು ಪರೀಕ್ಷೆ ನಡೆಸುವ ಶಿಕ್ಷಣ ಸಚಿವರ ಹೇಳಿಕೆ ಬಾಲಿಷವಾಗಿದೆ. ವರ್ಷದಲ್ಲಿ ಮೂರು ಪರೀಕ್ಷೆ ಮಾಡುವಂತೆ ಯಾರೋ ಅತೀ ಬುದ್ದಿವಂತರು ಸಚಿವರಿಗೆ ಸಲಹೆ ನೀಡಿದ್ದಾರೆ, ಅವರ ಸಲಗೆಯನ್ನೇ ಸಚಿವರು ಆದೇಶ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ವರ್ಷಕ್ಕೆ ನಾಲ್ಕು ಪರೀಕ್ಷೆ ಎಂದು ಆದೇಶಿಸಿದರೂ ಅಚ್ಚರಿಯಿಲ್ಲ ಎಂದ ಅವರು, ವರ್ಷಕ್ಕೆ ಎರಡು ಪರೀಕ್ಷೆ ಸೂಕ್ತವಾಗಿದೆ.ಸಚಿವರು ತಮ್ಮ ಆದೇಶವನ್ನು ಪುನರ್ ಪರಿಶೀಲಿಸಬೇಕೆಂದರು.ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್ ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್