ಬೆಂಗಳೂರು : ಜೆಡಿಎಸ್ ಪಕ್ಷವು ಎನ್ಡಿಎ ಮೈತ್ರಿಕೂಟ ಸೇರುವ ಮೂಲಕ ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಯಾಗಿದ್ದು, ಉಭಯ ಪಕ್ಷಗಳು ಒಟ್ಟಾಗಿ ಹೋಗಬೇಕಿದೆ.
ಹಾಗಾಗಿ ಸದ್ಯದಲ್ಲೇ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಜೊತೆ ಮಾತುಕತೆ ನಡೆಸುತ್ತೇನೆ ಎಂದು ರಾಜ್ಯ ಬಿಜೆಪಿ ಹಿರಿಯ ನಾಯಕ, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಡಾಲರ್ಸ್ ಕಾಲೋನಿ ನಿವಾಸ ಧವಳಗಿರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಭೇಟಿ ಆಗಿದ್ದರು. ಈ ಭೇಟಿಯಲ್ಲಿ ವಿಶೇಷತೆ ಏನಿಲ್ಲ, ಸೌಹಾರ್ದಯುತವಾಗಿ ಭೇಟಿ ಮಾಡಿದ್ದರು ಅಷ್ಟೇ. ಕುಮಾರಸ್ವಾಮಿ ಅವರೂ ಕರೆ ಮಾಡಿದ್ದರು.
ಮನೆಗೆ ಬಂದು ಹೋಗಿ ಅಂದಿದ್ದಾರೆ. ಸದ್ಯದಲ್ಲೇ ಕುಮಾರಸ್ವಾಮಿ ಅವರ ಮನೆಗೆ ಹೋಗಿ ಮಾತನಾಡಿಸಿಕೊಂಡು ಬರುತ್ತೇನೆ. ಹೇಗೂ ನಮ್ಮ ಜತೆ ಅವರು ಹೊಂದಾಣಿಕೆ ಆಗಿದ್ದಾರೆ. ಹಾಗಾಗಿ ನಾವೆಲ್ಲರೂ ಒಟ್ಟಾಗಿ ಹೋಗಬೇಕಿದೆ ಎಂದರು.
ಇದೇ ವೇಳೆ ಮೈತ್ರಿ ವಿಚಾರದ ಕುರಿತು ಮುಂದಿನ ಮಾತುಕತೆ ನಡೆಸಲು ಹೈಕಮಾಂಡ್ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಅಂತಹ ಆಲೋಚನೆ ಇಲ್ಲ ಎಂದು ತಿಳಿಸಿದರು.