ಸಿರುಗುಪ್ಪ : ಕೆಲಸದಲ್ಲಿ ಕಾರ್ಮಿಕರಾಗಿದ್ದರೂ ಸಹ ನಗರವನ್ನು ಸ್ವಚ್ಛವಾಗಿಡುವ ಮೂಲಕ ನಮ್ಮ ನಿಮ್ಮೆಲ್ಲರ ಆರೋಗ್ಯವನ್ನು ಕಾಪಾಡುವ ಪೌರ ಕಾರ್ಮಿಕರ ಸೇವೆ ಬಹುಮುಖ್ಯವಾದದ್ದು ಎಂದು ಪೌರಾಯುಕ್ತ ಗಂಗಾಧರ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಭವಾನಿ ಫಂಕ್ಷನ್ ಹಾಲ್ ನಲ್ಲಿ ಕರ್ನಾಟಕ ರಾಜ್ಯ ಪೌರ ನೌಕರರ ಸಂಘ ಸಿರುಗುಪ್ಪ ಶಾಖೆಯಿಂದ ಮಂಗಳವಾರದಂದು ನಡೆದ ಪೌರಕಾರ್ಮಿಕರ ದಿನಾಚರಣೆಯನ್ನುದ್ದೇಶಿಸಿ ಮಾತನಾಡಿದ ಅವರು ಇಂತಹ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಅವರ ಸೇವೆಗೆ ನಾವು ಅಲ್ಪ ಸೇವೆಯನ್ನು ಮಾತ್ರ ನೀಡುತ್ತಿದ್ದೇವೆ. ಎಲ್ಲರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದು ತಿಳಿಸಿದರು.
ದಿನಾಚರಣೆಯ ನಿಮಿತ್ತ ನಗರಸಭೆ ಕಾರ್ಯಾಲಯದಿಂದ ರಾಜ ಬೀದಿಗಳಲ್ಲಿ ಸ್ವಚ್ಛತೆಯ ಶಿವಶರಣೆ ಸತ್ಯಕ್ಕ ಅವರ ಬೃಹತ್ ಭಾವಚಿತ್ರದ ಮೆರವಣಿಗೆ ನಡೆಯಿತು. ಪೌರ ಕಾರ್ಮಿಕರು ಮತ್ತು ನೌಕರರು ಅಲಂಕಾರಿಕ ಉಡುಗೆಗಳನ್ನು ತೊಟ್ಟು ಕುಣಿದು ಸಂಭ್ರಮಿಸಿದರು.
ನಗರದ ಬೈಪಾಸ್ ರಸ್ತೆಯಲ್ಲಿರುವ ಶ್ರೀ ಬಸವೇಶ್ವರ ವೃದ್ಧಾಶ್ರಮದಲ್ಲಿ ಹಣ್ಣು ಹಂಪಲುಗಳನ್ನು ವಿತರಿಸಿ ಮೆರವಣಿಗೆ ಸಂಪನ್ನವಾಯಿತು. ನಂತರ ಭವಾನಿ ಪಂಕ್ಷನ್ ಹಾಲ್ನಲ್ಲಿ ಜರುಗಿದ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷೆ ಬಿ.ರೇಣುಕಮ್ಮ ಉಪಾಧ್ಯಕ್ಷೆ ಯಶೋದ ಮೂರ್ತಿ ಅವರು ಉದ್ಘಾಟಿಸಿ ಮುಂದಿನ ದಿನಗಳಲ್ಲೂ ಉತ್ತಮ ಸೇವೆಗೈದು ನಗರದ ಸ್ವಚ್ಛತೆಗೆ ಆಧ್ಯತೆಯನ್ನು ನೀಡಬೇಕೆಂದರು.
ಇದೇ ವೇಳೆ ನಗರಸಭೆ ವ್ಯವಸ್ಥಾಪಕ ಖಾಜಾ ಹುಸೇನ್, ಸಹಾಯಕ ಕಾರ್ಯಪಾಲಕ ರಮೇಶ, ಪೌರ ನೌಕರರ ಸಂಘದ ಅಧ್ಯಕ್ಷ ರಂಗಸ್ವಾಮಿ.ಹೆಚ್, ಮಾಜಿ ಅಧ್ಯಕ್ಷ ಅಮರೇಶ, ಉಪಾಧ್ಯಕ್ಷ ಸಣ್ಣೆಪ್ಪ, ಪ್ರಧಾನ ಕಾರ್ಯದರ್ಶಿ ಡಿ.ಪಂಪಾಪತಿ ಸೇರಿದಂತೆ ಪದಾಧಿಕಾರಿಗಳು ಆಡಳಿತ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ಪೌರಕಾರ್ಮಿಕರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ




