ಹಾವೇರಿ: ‘1850ರ ಕಾಯ್ದೆಯನ್ನು ಮುಂದಿಟ್ಟುಕೊಂಡು ಸುಪ್ರೀಂಕೋರ್ಟ್ ಆದೇಶವಿದೆ ಎಂದು ಹೇಳಿ, ನನ್ನ ತೋಟ ಸೇರಿ ಹಲವು ಜನರ ಜಾಗವನ್ನು ತೆರವು ಮಾಡಲು ಮುಂದಾಗಿದ್ದಾರೆ.
ನಮ್ಮ ಅಜ್ಜನ ಕಾಲದಿಂದ ವಾಸವಿರುವ ಜಾಗವನ್ನು ಹೇಗೆ ತೆರವು ಮಾಡುತ್ತಾರೆ. ಈ ವರ್ತನೆಯಿಂದ ಬೇಸರವಾಗಿದೆ’ ಎಂದು ವಿಧಾನಸಭೆಯ ಉಪ ಸಭಾಧ್ಯಕ್ಷರೂ ಆಗಿರುವ ಶಾಸಕ ರುದ್ರಪ್ಪ ಲಮಾಣಿ ಅವರು ಕಣ್ಣೀರಿಟ್ಟರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅರಣ್ಯ ಇಲಾಖೆಯ ಡಿಎಫ್ಒ ಅಕ್ಷಯ್ ಪ್ರಭಾಕರಕರ್ ಅವರನ್ನು ಪ್ರಶ್ನಿಸಿದ ಲಮಾಣಿ, ‘ನಮ್ಮ ಸಮಸ್ಯೆಯನ್ನು ಬಗೆಹರಿಸಿ’ ಎಂದು ವಿನಂತಿಸಿದರು.
‘ಜಿಲ್ಲೆಯಲ್ಲಿ ಜನರು ಬದುಕಲು ಅರಣ್ಯ ಇಲಾಖೆಯವರು ಬಿಡುತ್ತಿಲ್ಲ. ಹಲವು ವರ್ಷಗಳಿಂದ ವಾಸವಿರುವ ಜನರನ್ನು ಒಕ್ಕಲು ಎಬ್ಬಿಸುತ್ತಿದ್ದಾರೆ. ಗುತ್ತಲ ಬಳಿ ಎಸ್ಟಿಪಿ ಘಟಕದ ಕಾಂಪೌಂಡ್ ವಿಚಾರವಾಗಿ ಇಬ್ಬರ ಮೇಲೆ ಎಫ್ಐಆರ್ ಆಗಿದೆ.
ಅರಣ್ಯ ಇಲಾಖೆಯವರನ್ನು ಪ್ರಶ್ನಿಸಿದವರ ಮೇಲೆ ಪ್ರಕರಣ ಹಾಕುತ್ತ ಹೋದರೆ, ನಾವು ಎಲ್ಲಿಗೆ ಹೋಗಬೇಕು. ನಾವು ಬದುಕುವುದು ಬೇಡವೇ. ನಾವು ಊರು ಬಿಟ್ಟು ಹೋಗುತ್ತೇವೆ. ನೀವೇ ಇಲ್ಲಿ ಬದುಕಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.




