ಆಕ್ಲೆಂಡ್ : ಸತತ ಸೋಲುಗಳಿಂದ ಕಂಗೆಟ್ಟಿದ್ದ ಪಾಕಿಸ್ತಾನ ಕ್ರಿಕೆಟ್ ತಂಡ ಕೊನೆಗೂ ಗೆಲುವಿನ ನಗೆ ಬೀರಿದೆ. ಈ ಬಾರಿ ಪಾಕ್ ಗೆ ದೊರಕಿದ್ದು, ಅಂತಿಥ ಗೆಲುವಲ್ಲ. ದಾಖಲೆಯ ಗೆಲುವು.
ಹೌದು ಪಾಕ್ ತಂಡ ನ್ಯೂಜಿಲೆಂಡ್ ವಿರುದ್ಧ ಇಲ್ಲಿ ನಡೆದ ಮೂರನೇ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ ದಾಖಲೆಯ ಗೆಲುವನ್ನು ಪಡೆದಿದೆ. ಅತಿ ವೇಗವಾಗಿ 200 ರನ್ ಚೇಸ್ ಮಾಡಿ ಗೆದ್ದ ತಂಡ ಎಂಬ ದಾಖಲೆಯನ್ನು ಮಾಡಿದರೆ, ತಂಡದ ಯುವ ಬ್ಯಾಟುಗಾರ ಹಸನ್ ನವಾಜ್ ವೇಗದ ಶತಕ ಸಿಡಿಸಿದರು.
ಮೊದಲು ಬ್ಯಾಟ್ ಮಾಡಿದ ಆತಿಥೇಯ ನ್ಯೂಜಿಲೆಂಡ್ ತಂಡ 204 ರನ್ ಗಳಿಗೆ ಆಲೌಟಾಯಿತು. ದೊಡ್ಡ ಮೊತ್ತ ಬೆನ್ನಟ್ಟಿದ ಪಾಕಿಸ್ತಾನ ತಂಡ ಇನ್ನು ನಾಲ್ಕು ಓವರುಗಳು ಬಾಕಿ ಇರುವಂತೆ 9 ವಿಕೆಟ್ ಗಳಿಂದ ಪಂದ್ಯ ಗೆದ್ದು ದೊಡ್ಡ ಗೆಲುವನ್ನು ಪಡೆಯಿತು. ಪಾಕ್ ಪರವಾಗಿ ಹಸನ್ ನವಾಜ್ 10 ಬೌಂಡರಿ 7 ಸಿಕ್ಸರ್ ನೆರವಿನಿಂದ 45 ಎಸೆತಗಳಲ್ಲಿ 105 ರನ್ ಗಳಿಸಿದರು. ಮೊಹ್ಮದ್ ಹ್ಯಾರಿಸ್ 41 ಹಾಗೂ ನಾಯಕ ಸಲ್ಮಾನ್ ಆಘಾ ಬಿರುಸಿನ ಅಜೇಯ 51 ತಂಡದ ಗೆಲುವನ್ನು ಸುಲಭವಾಗಿಸಿದರು. ಇದಕ್ಕೆ ಮುನ್ನ ನ್ಯೂಜಿಲೆಂಡ್ ಪರವಾಗಿ ಚಾಂಪಮನ್ 11 ಬೌಂಡರಿ 4 ಸಿಕ್ಸರ್ ನೆರವಿನಿಂದ ಕೇವಲ 44 ಎಸೆತಗಳಲ್ಲಿ 94 ರನ್ ಗಳಿಸಿದ್ದರು.