ಬುಧವಾರ ನಡೆದ ಐಪಿಎಲ್ನ 63ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿ ಆಗಿದ್ದವು. ಈ ರೋಚಕ ಪಂದ್ಯದಲ್ಲಿ ಮುಂಬೈ ತಂಡ ಭರ್ಜರಿ ಗೆಲುವು ಸಾಧಿಸಿ ಪ್ಲೇಆಫ್ಗೆ ಲಗ್ಗೆ ಇಟ್ಟಿದೆ.
ವಾಂಖೆಡೆ ಮೈದಾನದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಸೋತ ಮುಂಬೈ ಮೊದಲು ಬ್ಯಾಟಿಂಗ್ ಮಾಡಲು ಬಂದಿತ್ತು. ಆದರೆ, ಪವರ್ ಪ್ಲೇನಲ್ಲೆ ತಂಡ 48 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿತು. ಇದರ ಬೆನ್ನಲ್ಲೆ ಮತ್ತೆ 10 ರನ್ ಗಳಿಸುವಷ್ಟರಲ್ಲೆ 3 ವಿಕೆಟ್ ಉರುಳಿತು. ಈ ವೇಳೆ ಬ್ಯಾಟಿಂಗ್ಗೆ ಆಗಮಿಸಿದ ಸೂರ್ಯಕುಮಾರ್ ಯಾದವ್ ಕುಸಿಯುತ್ತಿದ್ದ ತಂಡಕ್ಕೆ ಗೆಲುವಿನ ಬುನಾದಿ ಹಾಕಿದರು. ಕೇವಲ 43 ಎಸೆತಗಳಲ್ಲಿ ಅವರು 73 ರನ್ ಬಾರಿಸಿದರು. ಉಳಿದಂತೆ ತಿಲಕ್ ವರ್ಮಾ (27) ಮತ್ತು ನಮನ್ ದೀರ್ (24*) ರನ್ ಬಾರಿಸಿದ್ದರಿಂದ ಮುಂಬೈ 180 ರ ಗಡಿಗೆ ತಲುಪಿತು.
ಈ ಗುರಿಯನ್ನು ಭೇದಿಸಲು ಆಗಮಿಸಿದ ಡೆಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿತು. ಮುಂಬೈ ಬೌಲಿಂಗ್ಗೆ ನಲುಗಿದ ಕ್ಯಾಪಿಟಲ್ಸ್ 121 ರನ್ಗಳಿಗೆ ಸರ್ವಪತನ ಕಂಡಿತು. ತಂಡದ ಪರ ಸಮೀರ್ ರಿಜ್ವಿ (39) ಹೊರತು ಪಡಿಸಿ ಉಳಿದ ಬ್ಯಾಟರ್ಗಳು ಕಳಪೆ ಪ್ರದರ್ಶನ ನೀಡಿದ್ದು, ತಂಡಕ್ಕೆ ಸೋಲಿನ ಸುಳಿಗೆ ಸಿಲುಕಿಸಿತು. ಇದರೊಂದಿಗೆ ಡೆಲ್ಲಿ ಪ್ಲೇ ಆಫ್ ಆಸೆ ಕೈಚೆಲ್ಲಿತು.
ಇತಿಹಾಸ ಮರುಕಳಿಸುತ್ತಾ?: ಈ ಹಿಂದೆ 2015ರ ಆವೃತ್ತಿಯಲ್ಲೂ ಮುಂಬೈ ಇಂಡಿಯನ್ಸ್ ಆರಂಭಿಕ ನಾಲ್ಕು ಪಂದ್ಯಗಳಲ್ಲಿ ಸೋಲನ್ನು ಕಂಡಿತ್ತು. ಬಳಿಕ ಸತತ ಪಂದ್ಯಗಳನ್ನು ಗೆದ್ದು ಫೈನಲ್ಗೆ ಪ್ರವೇಶ ಪಡೆದಿತ್ತು. ಫೈನಲ್ನಲ್ಲಿ ಚೆನ್ನೈ ತಂಡವನ್ನು ಮಣಿಸಿ ಎರಡನೇ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಈ ಬಾರಿಯೂ ಆರಂಭಿಕ 5 ಪಂದ್ಯಗಳಲ್ಲಿ ನಾಲ್ಕು ಮ್ಯಾಚ್ ಸೋಲನ್ನು ಕಂಡಿದ್ದ ಮುಂಬೈ ಇದೀಗ ಪ್ಲೇಆಫ್ಗೆ ಲಗ್ಗೆ ಇಟ್ಟಿದೆ. ಇದರ ಬೆನ್ನಲ್ಲೆ ಫ್ಯಾನ್ಸ್ ಇತಿಹಾಸ ಮರುಕಳಿಸುತ್ತೆ ಎಂದು ಹೇಳಲಾರಂಭಿಸಿದ್ದಾರೆ.
ದಾಖಲೆ ಬರೆದ ಸೂರ್ಯ: ತಮ್ಮ ಸ್ಫೋಟಕ ಇನ್ನಿಂಗ್ಸ್ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಸೂರ್ಯಕುಮಾರ್ ಯಾದವ್ ಅಪರೂಪದ ದಾಖಲೆ ಬರೆದಿದ್ದಾರೆ. ಸತತ 13 ಇನ್ನಿಂಗ್ಸ್ಗಳಲ್ಲಿ 25+ ರನ್ ಬಾರಿಸಿದ ಆಟಗಾರ ಎಂಬ ಸಾಧನೆ ಮಾಡಿದ್ದಾರೆ.




