ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಿ : ಕುಂಇ ಅಹಮದ್
ತುರುವೇಕೆರೆ: ಮುಂಬರುವ ಬೇಸಿಗೆಯಲ್ಲಿ ತಾಲ್ಲೂಕಿನ ಯಾವುದೇ ಗ್ರಾಮಗಳ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಅಧಿಕಾರಿಗಳು ಈಗಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ತಹಸೀಲ್ದಾರ್ ಕುಂಇ ಅಹಮದ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಕುಡಿಯುವ ನೀರಿನ ಲಭ್ಯತೆ ಹಾಗೂ ಜಾನುವಾರುಗಳ ಮೇವಿನ ಲಭ್ಯತೆ ಕುರಿತಂತೆ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಪಂ ಪಿಡಿಒಗಳೊಂದಿಗೆ ಟಾಸ್ಕ್ ಪೋರ್ಸ್ ಸಮಿತಿ ಸಭೆ ನಡೆಸಿದ ಅವರು, ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗಬಹುದಾದ ಗ್ರಾಮಗಳನ್ನು ಈಗಲೇ ಗುರುತಿಸಿ ಪಟ್ಟಿ ಮಾಡಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಬೇಸಿಗೆಯಲ್ಲಿ ಜನರಿಗೆ ಮಾತ್ರವಲ್ಲದೆ ಜಾನುವಾರುಗಳಿಗೆ ಮೇವು, ಕುಡಿಯುವ ನೀರಿನ ಲಭ್ಯತೆ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಬೇಕು. ಬಿಸಿಲಿನ ಝಳ ಹೆಚ್ಚಿರುವುದರಿಂದ ನೀರಿನ ಅಗತ್ಯತೆಯೂ ಅಷ್ಟೇ ಹೆಚ್ಚಿರುತ್ತದೆ. ಯಾವುದೇ ಗ್ರಾಮದಿಂದಲೂ ನೀರಿನ ಕೊರತೆ ಎಂಬ ದೂರು ಬಾರದಂತೆ ಅಧಿಕಾರಿಗಳು, ಪಂಚಾಯ್ತಿ ವ್ಯಾಪ್ತಿಯಲ್ಲಿ ಪಿಡಿಒ, ಕಾರ್ಯದರ್ಶಿಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದರು.

ಆನೆಕೆರೆ, ಕಡೇಹಳ್ಳಿ ಕಾವಲ್, ಮುನಿಯೂರು ವಿವೇಕಾನಂದ ನಗರ, ಮಂಗಿಕುಪ್ಪೆ, ಡೊಂಕೀಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ಬೋರ್ವೆಲ್ ರಿಪೇರಿ ಅಥವಾ ಹೊಸದಾಗಿ ಬೋರ್ವೆಲ್ ಅಳವಡಿಸಬೇಕಿದೆ. ಮಂಗಿಕುಪ್ಪೆಯಲ್ಲಿ ಮುಂದಿನ ತಿಂಗಳಿನಿಂದಲೇ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕಾದ ಅನಿವಾರ್ಯತೆ ಇದೆ ಎಂದು ವಿವಿಧ ಪಂಚಾಯ್ತಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಸಭೆಯ ಗಮನಕ್ಕೆ ತಂದರು. ತುರುವೇಕೆರೆ ಪಟ್ಟಣಕ್ಕೆ ಸಂಬಂಧಿಸಿದಂತೆ 38 ಬೋರ್ಗಳು ಕಾರ್ಯನಿರ್ವಹಿಸುತ್ತಿದ್ದು ಮಲ್ಲಾಘಟ್ಟ ಕೆರೆ ಮೂಲಕ ಪ್ರತಿ ವಾರ್ಡ್ಗೆ ಪ್ರತಿ ಐದು ದಿನಕ್ಕೆ ಒಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಮುಖ್ಯಾಧಿಕಾರಿ ಶ್ರೀನಾಥ್ ಬಾಬು ಸಭೆಗೆ ಮಾಹಿತಿ ನೀಡಿದರು. ಮೇವು ಲಭ್ಯವಿರುವುದರಿಂದ ಈ ಬಾರಿ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗುವುದಿಲ್ಲ. ಬೀದಿನಾಯಿಗಳ ಹಾವಳಿ ತಡೆಯುವ ನಿಟ್ಟಿನಲ್ಲಿ ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಪಶು ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಶಾಲಾ ಆವರಣದಲ್ಲಿ ಅನುಮತಿ ಇಲ್ಲದೆ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಶಾಲೆಯ ಆವರಣ ಕಿರಿದಾಗುತ್ತದೆ. ಶಾಲೆಯ ಆವರಣದಲ್ಲಿ ಟ್ಯಾಂಕ್ ನಿರ್ಮಾಣ ಮಾಡುವುದಾದರೆ ಇಲಾಖೆಯ ಅನುಮತಿ ಪಡೆಯಬೇಕು ಹಾಗೂ ಶಾಲಾ ಆವರಣದಲ್ಲಿ ಯಾವುದಾದರೊಂದು ಮೂಲೆಯಲ್ಲಿ ಟ್ಯಾಂಕ್ ನಿರ್ಮಿಸಿದರೆ ಒಳ್ಳೆಯದು. ಶಾಲೆಯ ಕೊಠಡಿಯ ಪಕ್ಕದಲ್ಲಿ ಅಥವಾ ಮೈದಾನದಲ್ಲಿ ನಿರ್ಮಿಸುವುದರಿಂದ ಮುಂದಿನ ದಿನಗಳಲ್ಲಿ ಶಾಲೆಗೆ ಅಗತ್ಯವಿರುವ ಕೊಠಡಿ ನಿರ್ಮಾಣಕ್ಕೆ, ಮಕ್ಕಳಿಗೆ ಆಟವಾಡಲು ಸ್ಥಳ ಸಮಸ್ಯೆಯಾಗುತ್ತದೆ. ಅಲ್ಲದೆ ಟ್ಯಾಂಕ್ ಹಳೆಯದಾದ ನಂತರ ಕುಸಿದುಬಿದ್ದರೆ ಮಕ್ಕಳ ಜೀವಹಾನಿಯಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ. ಈ ಬಗ್ಗೆ ಅಧಿಕಾರಿಗಳು ಸೂಕ್ತ ಆದೇಶ ಮಾಡಬೇಕೆಂದು ಬಿಇಒ ಸೋಮಶೇಖರ್ ಸಭೆಗೆ ತಿಳಿಸಿದರು.
ಪಟ್ಟಣ ಹಾಗೂ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋಗಿದ್ದರೆ ಕೂಡಲೇ ಸರಿಪಡಿಸಿ, ಜನರಿಗೆ ಶುದ್ಧ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಬೇಕು. ತಾಲೂಕಿನ ಎಲ್ಲೆಡೆ ಚಿರತೆ ಹಾವಳಿ ಹೆಚ್ಚಾಗಿದ್ದು, ಚಿರತೆ ದಾಳಿ ತಡೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಪಂಚಾಯ್ತಿ ಪಿಡಿಒ, ಕಾರ್ಯದರ್ಶಿಗಳು ಕಸ ಸಂಗ್ರಹಣಾ ವಾಹನದಲ್ಲಿ ಮೈಕ್ ಮೂಲಕ ಚಿರತೆ ಹಾವಳಿ ಬಗ್ಗೆ ಎಚ್ಚರದಿಂದಿರುವಂತೆ ಹಾಗೂ ಸಹಾಯವಾಣಿ ನಂಬರ್ ನೀಡಿ ಚಿರತೆ ಕಂಡುಬಂದಲ್ಲಿ ಸಹಾಯವಾಣಿಗೆ ಕರೆ ಮಾಡುವಂತೆ ಹೆಚ್ಚಿನ ಪ್ರಚಾರ ಮಾಡಬೇಕು. ಬೀದಿನಾಯಿಗಳಿಂದ ಮಕ್ಕಳು, ಮಹಿಳೆಯರು, ಜನತೆ ತೊಂದರೆ ಅನುಭವಿಸುತ್ತಿದ್ದು, ಈ ಬಗ್ಗೆ ಪಶು ಇಲಾಖೆ ಸೂಕ್ತ ಕ್ರಮವಹಿಸಬೇಕು. ಸಾರ್ವಜನಿಕ ಆಸ್ಪತ್ರೆಗಳಲ್ಲಿ ನಾಯಿ ಕಡಿತಕ್ಕೆ ಅಗತ್ಯ ಚಿಕಿತ್ಸೆ ಲಭ್ಯವಿರುವಂತೆ ವೈದ್ಯಾಧಿಕಾರಿಗಳು ನೋಡಿಕೊಳ್ಳಬೇಕೆಂದು ತಹಸೀಲ್ದಾರ್ ಕುಂಇ ಅಹಮದ್ ಹಾಗೂ ಇಒ ಅನಂತರಾಜು ಅಧಿಕಾರಿಗಳಿಗೆ ಆದೇಶಿಸಿದರು.
ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂಜೆ, ಪಪಂ ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಸೇರಿದಂತೆ ತಾಲೂಕಿನ ವಿವಿಧ ಇಲಾಖಾಧಿಕಾರಿಗಳು, ಗ್ರಾಮ ಪಂಚಾಯ್ತಿ ಪಿಡಿಒ, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್




